ಚಿಕ್ಕಮಗಳೂರು ತಾಲ್ಲೂಕಿನಲ್ಲಿ ನಡೆದಿದ್ದ ಕಡವೆ ಕಳ್ಳತನ ಬೇಟೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಇನ್ನೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಕಳೆದ ಭಾನುವಾರ ತೋಗರಿಹಂಕಲ್ ಕೂತನಕುಲ್ ಎಸ್ಟೇಟ್ ನ ಮನೆಯ ಮೇಲೆ ದಾಳಿ ಮಾಡಿ ಕಡವೆ ಶಿಖಾರಿ ಮಾಡಿ, ಚರ್ಮ ಸುಲಿದು ಮಾಂಸ ತುಂಡು ಮಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿತ್ತು. 5 ಜನ ತಪ್ಪಿಸಿಕೊಂಡಿದ್ದು ಎಸ್ಟೇಟ್ ರೈಟರ್ ದೇವಯ್ಯ ನನ್ನು ಬಂಧಿಸಿದ್ದರು.
ಕಡವೆ ಚರ್ಮ, ಅಂದಾಜು 40 ಕೆ ಜಿ ಮಾಂಸ, ಶಿಖಾರಿಗೆ ಬಳಸುತ್ತಿದ್ದ 2 ಕೋವಿ, ಚೂರಿ, ಚಾಕುವನ್ನು ವಶಕ್ಕೆ ಪಡೆದು ಅರಣ್ಯ ಅಪರಾಧ ಪ್ರಕರಣವನ್ನು ದಾಖಲಿಸಿದ್ದರು. ದೇವಯ್ಯನನ್ನು ವಿಚಾರಣೆಗೆ ಮಾಡಿದಾಗ ಕೂಲಿ ಕಾರ್ಮಿಕ ನಾಗರಾಜ್ ಜೊತೆ ಸೇರಿ ಎಂಬ ಎಸ್ಟೇಟ್ ನಲ್ಲಿ ಕೂಲಿ ಮಾಡುತ್ತಿದ್ದ ವ್ಯಕ್ತಿ ಕಡವೆಗೆ ಗುಂಡು ಹೊಡೆದು ಮನೆಯ ಹಿಂಭಾಗದ ಶೆಡ್ ಗೆ ತಂದು ಹಂಚಿಕೊಳ್ಳುವ ತಯಾರಿ ಮಾಡುತ್ತಿದ್ದೆವು ಎಂದು ಹೇಳಿ ತಪ್ಪು ಒಪ್ಪಿಕೊಂಡಿದ್ದ.
ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ನಡೆದ ಸ್ಥಳ ಪರಿಶೀಲನೆಗೆ ಅರಣ್ಯ ಸಂಚಾರಿ ದಳದ ತಂಡ ತೆರಳಿದಾಗ ಅಲ್ಲಿ ಗಂಡು ಕಡವೆ ಒಂದರ ತಲೆ ಬಿದ್ದಿರುವುದು ಕಂಡು ಬಂದಿದೆ. ಎಸ್ಟೇಟ್ ವ್ಯವಸ್ಥಾಪಕನನ್ನು ವಶಕ್ಕೆ ಪಡೆದು ಸ್ಥಳ ಪರಿಶೀಲನೆ ನಡೆಸಿ ಹೇಳಿಕೆ ಪಡೆದಾಗ, ದೇವಯ್ಯನೊಂದಿಗೆ ನಾಗರಾಜ್ ಮತ್ತು ಟಿಂಬರ್ ವ್ಯಾಪಾರಿ ಸುಭಾಷ್ ಶಾಮೀಲು ಆಗಿರುವುದು ಬೆಳಕಿಗೆ ಬಂದಿದೆ.
ಹೊಸಪೇಟೆಯಿಂದ ಚಿಕ್ಕಮಗಳೂರು ಕಡೆಗೆ ಬಸ್ ನಲ್ಲಿ ಬರುತ್ತಿದ್ದ ನಾಗರಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಟಿಂಬರ್ ವ್ಯಾಪಾರಿ ಸುಭಾಷ್ ಆಗಾಗ ಈ ಎಸ್ಟೇಟ್ ಗೆ ಬಂದು ಶಿಖಾರಿಗೆ ತೆರಳುತ್ತಿದ್ದ, ಅಂದು ಸಂಜೆ ಪಾಯಿಂಟ್ 30 ರೈಪಲ್ ನಿಂದ ಎಸ್ಟೇಟ್ ಸಮೀಪದ ಮೀಸಲು ಅರಣ್ಯದಲ್ಲಿ ಕಂಡು ಬಂದ ಕಡವೆಯನ್ನು ಗುಂಡು ಹೊಡೆದು ಅಕ್ರಮವಾಗಿ ಶಿಖಾರಿ ಮಾಡಿದ್ದಾನೆ ಎನ್ನುವ ಅಂಶ ಪತ್ತೆಯಾಗಿದೆ.
ಅತ್ತ ದೇವಯ್ಯ ಎಸ್ಟೇಟ್ ನ ಮಹಿಂದ್ರಾ ಪಿಕಪ್ ವಾಹನ ತೆಗೆದುಕೊಂಡು ಹೋಗಿ ಕಡವೆ ದೇಹವನ್ನು ಹಾಕಿಕೊಂಡು ಇಬ್ಬರೂ ಬಂದು ,ರಾತ್ರಿ ನಾಲ್ವರೊಡನೆ ಸೇರಿ ಕಡವೆಯ ಚರ್ಮ ಸುಲಿದು ಮಾಂಸ ಹಸನು ಮಾಡುತ್ತಿದ್ದಾಗ ದೇವಯ್ಯ ಸಿಕ್ಕಿಬಿದ್ದಿದ್ದಾನೆ.
ಸುಭಾಷ್ ಕೊಡಗು ಜಿಲ್ಲೆಯಿಂದ ಆಗಾಗ ಬಂದು ದೇವಯ್ಯನ ಮನೆಯಲ್ಲಿ ಉಳಿದು, ವನ್ಯಜೀವಿಗಳನ್ನು ಶಿಖಾರಿ ಮಾಡಿ ಮಾಂಸವನ್ನು ಪ್ಯಾಕ್ ಮಾಡಿಕೊಂಡು ಮತ್ತೆ ಕೊಡಗಿಗೆ ಹಿಂದಿರುಗುತ್ತಾನೆ ಎಂದು ನಾಗರಾಜ್ ಬಾಯಿ ಬಿಟ್ಟಿದ್ದಾನೆ.
ಪ್ರಕರಣ ನಡೆದು 5 ದಿನ ಕಳೆದರೂ ಎಸ್ಟೇಟ್ ಮಾಲೀಕರು ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳ ಮುಂದೆ ಬಾರದೇ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ತರುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.



