ಎರಡು ಪ್ರತ್ಯೇಕ ಘಟನೆಗಳಲ್ಲಿ ಕಾಡಾನೆ ದಾಳಿಯಿಂದ ನಾಲ್ವರು ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಸೋಮವಾರ ಈ ಘಟನೆಗಳು ನಡೆದಿವೆ.
ಮೊದಲ ಘಟನೆಯಲ್ಲಿ ಕಾಫಿ ಕೊಯ್ಲಿಗೆಂದು ತೋಟಕ್ಕೆ ತೆರಳುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೇಲೂರು ತಾಲ್ಲೂಕಿನ ಬಿಕ್ಕೋಡು ಎಸ್ಟೇಟ್‌ನಲ್ಲಿ ಸೋಮವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಗೀತಾ (40) ಮತ್ತು ಹೇಮ (38) ಗಾಯಗೊಂಡ ಮಹಿಳೆಯರು. ಕಾಫಿ ಎಸ್ಟೇಟ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾಡಾನೆಯು ಏಕಾಏಕಿ ದಾಳಿ ನಡೆಸಿದ್ದು, ಮಹಿಳೆಯರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿ, ತುಳಿದು ಗಾಯಗೊಳಿಸಿದೆ ಎನ್ನಲಾಗಿದೆ.
ಗೀತಾ ಅವರ ಹೊಟ್ಟೆ ಮತ್ತು ತಲೆಗೆ ತೀವ್ರ ಗಾಯವಾಗಿದ್ದು, ಹೇಮ ಅವರ ಮುಖ ಮತ್ತು ಬಲ ಕೈಗೆ ಗಂಭೀರ ಪೆಟ್ಟಾಗಿದೆ. ಗಾಯಗೊಂಡ ಮಹಿಳೆಯರನ್ನು ತಕ್ಷಣವೇ ಬೇಲೂರು ಸರ್ಕಾರಿ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಬೈಕ್ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ಚಂದ್ರೇಗೌಡ (58) ಹಾಗೂ ಪೂರ್ಣಿಮಾ (25) ಎಂಬುವವರು ಗಾಯಗೊಂಡವರು. ಪೂರ್ಣಿಮಾ ಎಂಟು ತಿಂಗಳ ಗರ್ಭಿಣಿ. ಚಂದ್ರೇಗೌಡ ಅವರು ಆಸ್ಪತ್ರೆಗೆಂದು ಪೂರ್ಣಿಮಾ ಅವರನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾರಿ ಮಧ್ಯೆ ದಾಳಿ ನಡೆಸಿದೆ. ಬೈಕ್ ಸಹಿತ ಇಬ್ಬರನ್ನೂ ಸೊಂಡಿಲಿನಿಂದ ಎತ್ತಿ ಬಿಸಾಡಿದೆ ಎನ್ನಲಾಗಿದೆ.
ಗರ್ಭಿಣಿ ಮಹಿಳೆ ಗಟ್ಟಿಯಾಗಿ ಕಿರುಚಾಡಿದ ನಂತರ ಕಾಡಾನೆ ಕಾಡಿನೊಳಕ್ಕೆ ಹೋಗಿದೆ. ಗಾಯಗೊಂಡವರನ್ನು ತಕ್ಷಣವೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ.
ಒಂದೇ ದಿನದಲ್ಲಿ ಬೇಲೂರು ತಾಲ್ಲೂಕಿನಲ್ಲಿ ಎರಡು ಕಾಡಾನೆ ದಾಳಿ ವರದಿಯಾಗಿದ್ದು, ಈ ದಾಳಿಗಳಲ್ಲಿ ಒಟ್ಟು ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಗಾಯಗೊಂಡಿದ್ದಾರೆ
ಈ ಘಟನೆ ಬಳಿಕ, ಬಿಕ್ಕೋಡು ಮತ್ತು ಸುತ್ತಮುತ್ತಲಿನ ರೈತರು ಹಾಗೂ ಕಾಫಿ ಬೆಳೆಗಾರರು ಕಾಡಾನೆ ಹಾವಳಿಯಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆಯು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.



