ಕುಡಿಯುವ ನೀರಿನ ಮೂಲಕ್ಕೆ ಕಾಫಿ ಪಲ್ಪರ್ ನೀರನ್ನು ಬಿಟ್ಟು ಅವಿವೇಕಿತನ ತೋರಿರುವ ಘಟನೆ ಕಾಫಿ ನಾಡಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಭದ್ರಾನದಿಗೆ ಸೇರುವ ಆನೆಬಿದ್ದ ಹಳ್ಳಕ್ಕೆ ಕಾಫಿ ಪಲ್ಪರ್ ನೀರು ಬಿಡುತ್ತಿದ್ದು, ಇದರಿಂದ ಹಳ್ಳವೆಲ್ಲಾ ಕಪ್ಪಾಗಿ ಹರಿಯುತ್ತಿದೆ.
ಆನೆಬಿದ್ದ ಹಳ್ಳಕ್ಕೆ ಕಾಫಿ ಪಲ್ಪರ್ ನೀರು ಬಿಟ್ಟಿರುವ ಕಿಡಿಗೇಡಿಗಳು, ಸಂಪೂರ್ಣ ಹಳ್ಳ ಕಲುಷಿತವಾಗುವಂತೆ ಮಾಡಿದ್ದಾರೆ. ಈ ನೀರು ಆನೆಬಿದ್ದ ಹಳ್ಳದಿಂದ ಮುಂದೆ ಭದ್ರಾನದಿಗೂ ಸೇರುತ್ತಿದೆ. ಇದರಿಂದ ಕುಡಿಯುವ ನೀರಿನ ಮೂಲಗಳು ಕಲುಷಿತವಾಗುತ್ತಿದ್ದು, ಜನಜಾನುವಾರು ಹಾಗೂ ಜಲಚರಗಳಿಗೆ ಈ ನೀರು ಮಾರಕವಾಗುತ್ತಿದೆ.
ಬಸರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆನೂರು, ಮಾಗೋಡು, ಕಣತಿ ಮುಂತಾದ ಗ್ರಾಮಗಳ ಜನರು ಕುಡಿಯುವ ನೀರಿಗೆ ಆನೆಬಿದ್ದ ಹಳ್ಳವನ್ನೇ ಅವಲಂಭಿಸಿದ್ದಾರೆ. ಇದೀಗ ಹಳ್ಳದ ನೀರು ಪಲ್ಪರ್ ನೀರಿನಿಂದ ವಿಷಕಾರಿಯಾಗಿ ಹರಿಯುತ್ತಿದ್ದು, ಜನರು ಕಲುಷಿತ ನೀರನ್ನು ಕುಡಿಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಬನ್ನೂರು ಭಾಗದ ಕಾಫಿ ಎಸ್ಟೇಟ್ ನವರೊಬ್ಬರು ತಮ್ಮ ತೋಟದ ಕಾಫಿ ಪಲ್ಪರ್ ನೀರನ್ನು ನೇರವಾಗಿ ಹಳ್ಳಕ್ಕೆ ಹರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಂಪೂರ್ಣ ಹಳ್ಳ ಕಪ್ಪು ಬಣ್ಣಕ್ಕೆ ತಿರುಗಿದ್ದು, ಹಳ್ಳಕ್ಕೆ ಕಾಫಿ ಪಲ್ಪರ್ ನೀರು ಬಿಟ್ಟವರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇತ್ತ ಗಮನ ಹರಿಸಿ ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ.
ಬನ್ನೂರು ಭಾಗದ ಕಾಫಿ ಎಸ್ಟೇಟ್ ನವರು ಆನೆ ಬಿದ್ದ ಹಳ್ಳಕ್ಕೆ ಇವರ ತೋಟದ ಪಲ್ಪರ್ ನೀರು ಮತ್ತು ವೇಸ್ಟನ್ನು ಬಿಡುತ್ತಿದ್ದು ಸಂಪೂರ್ಣವಾಗಿ ಆನೆ ಬಿದ್ದ ಹಳ್ಳ ಕಲುಷಿತವಾಗಿರುತ್ತದೆ ತಕ್ಷಣವೇ ಇವರ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
ಸುಪ್ರೀತ್ ಅರೆನೂರ್, ಸಾಮಾಜಿಕ ಕಾರ್ಯಕರ್ತ



