ರೈತ ಸಂಘದ ಹೆಸರಿನಲ್ಲಿ ರೈತ ಮುಖಂಡರೋರ್ವರು ತಮ್ಮ ವಯಕ್ತಿಕ ಕಾರಣಕ್ಕಾಗಿ ರೈತರ ಮೇಲೆಯೇ ದೌರ್ಜನ್ಯ ಎಸಗುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಲು ಪೊಲೀಸರು ಕ್ರಮ ವಹಿಸಬೇಕೆಂದು ಮೂಡಿಗೆರೆ ತಾಲ್ಲೂಕಿನ ಬಿಳ್ಳೂರು ಗ್ರಾಮದ ಕೃಷಿಕ ಪಿ.ಎ.ಪುಟ್ಟಸ್ವಾಮಿಗೌಡ(ವಿಷ್ಣುಗೌಡ) ಒತ್ತಾಯಿಸಿದರು.
ಅವರು ಸೋಮವಾರ ಮೂಡಿಗೆರೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂ. ಮಂಜುನಾಥಗೌಡ ಎಂಬುವರು ರೈತ ಸಂಘದ ಹೆಸರಿನಲ್ಲಿ ತನ್ನ ವೈಯುಕ್ತಿಕ ಹಿತಾಸಕ್ತಿಗೆ ಧರಣಿ ನಡೆಸಿ ಅಧಿಕಾರಿಗಳನ್ನು ಹೆದರಿಸುವ ಕಾರ್ಯ ಮಾಡುತ್ತಿದ್ದಾರೆ. ನಿರಂತರವಾಗಿ ಸ್ಥಳೀಯ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕಡಿದಾಳು ಗ್ರಾಮದ ಸರ್ವೆ ನಂ 76ರಲ್ಲಿ ನಮ್ಮ ತಂದೆಯವರ ಕಾಲದಿಂದಲೂ ಅನುಭವವಿರುವ ಹಾಗೂ ನಮ್ಮ ಹೆಸರಿನಲ್ಲಿ ಖಾತೆ ಹೊಂದಿರುವ ಕಾಫಿ ತೋಟದ ಗಿಡಗಳನ್ನು ಕಡಿದು ನಾಶಮಾಡಿದ್ದಾರೆ.
76 ವರ್ಷದ ಹಿಂದೆಯೇ ಪೋಡು ಆಗಿ, ಗಡಿ ಗುರುತು ಮಾಡಲಾಗಿದೆ. ಈ ಜಾಗ ತನಗೆ ಸೇರಿದ್ದೆಂದು ಮಂಜುನಾಥ್ ಅವರು ತನ್ನ ತೋಟಕ್ಕೆ ಅತಿಕ್ರಮ ಪ್ರವೇಶ ಮಾಡಿ ಸುಮಾರು 60 ವರ್ಷ ಹಳೆಯದಾದ 300ಕ್ಕೂ ಅಧಿಕ ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಅಲ್ಲದೇ ಕಾಫಿ ತೋಟದ ಬೇಲಿಯ ಕಂಬ ಮತ್ತು ತಂತಿಯನ್ನು ಕಿತ್ತು ಕೊಂಡೊಯ್ದಿದ್ದಾರೆ. ಇದರಿಂದ ಸುಮಾರು 5 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ದೂರಿದರು.
ನಮ್ಮ ಜಮೀನಿಗೆ ಸಂಬಂಧಿಸಿದಂತೆ 76 ವರ್ಷ ಹಿಂದೆ ಆಗಿದ್ದ ಪೋಡಿಯನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರದ್ದು ಮಾಡಿಸಿದ್ದಾರೆ. ಇದರ ವಿರುದ್ಧ ನಾವು ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಹಾಕಿದ್ದೇವೆ. ಇತ್ತೀಚೆಗೆ ಮಂಜುನಾಥ ಅವರು ಗೂಂಡಗಳನ್ನು ಕರೆತಂದು ನಮ್ಮ ತೋಟದ ಗಿಡಗಳನ್ನು ಕಡಿದು ಹಾಕಿದ್ದಾರೆ. ಅಲ್ಲದೇ ಬಿಳ್ಳೂರು ಗ್ರಾಮದಲ್ಲಿ ತಾನು ರಸ್ತೆ ಗಡಿಭಾಗವನ್ನು ಬಿಟ್ಟು ಕಾನೂನು ಬದ್ದವಾಗಿ ಕಟ್ಟಡ ಕಟ್ಟುತ್ತಿದ್ದರೂ, ವೈಯುಕ್ತಿಕ ದ್ವೇಷದಿಂದ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳಿಗೆ ಕಟ್ಟಡದ ಬಗ್ಗೆ ಅನಾವಶ್ಯಕವಾಗಿ ದೂರು ನೀಡಿ ತೊಂದರೆ ನೀಡುತ್ತಿದ್ದಾರೆ.
ಮಂಜುನಾಥಗೌಡ ಅವರಿಂದ ರೈತರ ಮೇಲಾಗುತ್ತಿರುವ ನಿರಂತರ ದಬ್ಬಾಳಿಕೆ ಕೊನೆಯಾಗಬೇಕು. ಇವರಿಗೆ ಬೆಂಬಲ ನೀಡುತ್ತಿರುವ ರೈತ ಮುಖಂಡರು ವಾಸ್ತವ ವಿಚಾರಗಳನ್ನು ಅರಿತುಕೊಳ್ಳಬೇಕು. ರೈತರ ಪರವಾಗಿ ಇರಬೇಕಾದ ರೈತ ಸಂಘವು ರೈತರ ಕಾಫಿ ಗಿಡಗಳನ್ನು ಕಡಿದವರಿಗೆ, ರೈತರಿಗೆ ಅನಾವಶ್ಯಕವಾಗಿ ಕಿರುಕುಳ ನೀಡುತ್ತಿರುವವರಿಗೆ ಬೆಂಬಲ ನೀಡಬಾರದು ಎಂದರು.
ಮಂಜುನಾಥ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮೋಹನ್ ಸಾಲಗೆರೆ, ಎಸ್.ಎ.ವಾಸುದೇವ ಸತ್ತಿಗನಹಳ್ಳಿ, ಸಾಹೀರ್ ಉಪಸ್ಥಿತರಿದ್ದರು.



