ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಚಿಂತನೆ ಮಾಡುವ ಮನಸ್ಥಿತಿ ಹಾಗೂ ಉತ್ತಮ ಶಿಕ್ಷಕರ ಪರಿಶ್ರಮದಿಂದ ಮಾತ್ರ ವಿದ್ಯಾಸಂಸ್ಥೆಗಳು ಯಶಸ್ಸಿನತ್ತ ಸಾಗಲು ಸಾಧ್ಯ ಎಂದು ವಿಧಾನ ಪರಿಷತ್ತು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಭಾನುವಾರ ಸಂಜೆ 25ನೇ ವರ್ಷ ಪೂರೈಸಿದ ಮೂಡಿಗೆರೆ ಎಂಇಎಸ್ ಶಾಲೆಯ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ತಾಲೂಕಿನಲ್ಲಿ ವಿದ್ಯಾ ಸಂಸ್ಥೆಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಕರಾವಳಿಯತ್ತ ಮುಖ ಮಾಡುವ ಪರಿಸ್ಥಿತಿ ಇತ್ತು. ಆದರೆ ಈಗ ತಾಲೂಕಿನಲ್ಲಿಯೇ ಉತ್ತಮವಾದ ವಿದ್ಯಾಸಂಸ್ಥೆಗಳು ಪ್ರಾರಂಭಗೊಂಡಿದ್ದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಒಂದು ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸುವುದು ಮಾತ್ರವಲ್ಲ. ಅದನ್ನು ಮುನ್ನಡೆಸಿಕೊಂಡು ಹೋಗುವುದು ಹರಸಾಹಸದ ಕೆಲಸ. ಅಂತಹ ಮಹಾನ್ ಕಾರ್ಯವನ್ನು ಎಂಎಇಎಸ್ ಶಾಲೆ ಮುಖ್ಯಸ್ಥರು ಮಾಡುವ ಮೂಲಕ 25 ವರ್ಷದ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ದೇಶದ ಭವಿಷ್ಯ ಶಾಲೆಗಳಲ್ಲಿರುತ್ತದೆ. ಪಠ್ಯ ಪುಸ್ತಕದ ಜತೆಗೆ ಜ್ಞಾನದ ಹೊತ್ತಿಗೆಯನ್ನು ಹೊತ್ತಿರುವ ಎಲ್ಲಾ ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು. ಆಗ ಇನ್ನಷ್ಟು ಜ್ಞಾನ ಸಂಪಾದಿಸಬಹುದು. ಒಂದು ಕಲ್ಲನ್ನು ಕೆತ್ತಿ ಸುಂದರವಾದ ಶಿಲೆ ಮಾಡಿದ ಹಾಗೆಯೆ ಈ ಎಂಇಎಸ್ ಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕವೃಂದ ಕೂಡ ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸಲು ಅತ್ಯಂತ ಶ್ರಮ ವಹಿಸುತ್ತಾ ಬಂದಿದೆ. ಇದಕ್ಕೆ ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆದಿರುವುದೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಖ್ಯಾತ ಹಾಸ್ಯ ಕಲಾವಿದರಾದ ಜಗ್ಗಪ್ಪ ಹಾಗೂ ಸುಶ್ಮಿತಾ ಅವರು ಹಾಸ್ಯ ಚಟಾಕಿ ಹಾರಿಸುವ ಮೂಲಕ ನೆರೆದಿದ್ವವರನ್ನು ಮನೋರಂಜಿಸಿದರು. ಈ ಸಂದರ್ಭದಲ್ಲಿ 20 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಈ ಶಾಲೆಯಲ್ಲಿ ಓದಿ ಉನ್ನತ ಹುದ್ದೆ ಪಡೆದ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಇಎಸ್ ಶಾಲೆ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ವಹಿಸಿದ್ದರು. ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ತಾ.ಪಂ. ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಶಾಲೆ ಪ್ರಾಂಶುಪಾಲೆ ಚಿಂತು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕಿಯರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.



