ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಗುರುಶಿಷ್ಯರು, ಪೋಷಕರು, ಸಹೋದರರು, ಬಂದುಗಳ ನಡುವಿನ ಉತ್ತಮ ಬಾಂಧವ್ಯದ ಸಂಬಂಧ ಕಳೆದುಕೊಳ್ಳುವಂತಹ ಕಾಲಘಟ್ಟಕ್ಕೆ ಬಂದಿರುವುದು ದುರಂತ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಅವರು ಸೋಮವಾರ ಸಂಜೆ ಮೂಡಿಗೆರೆ ಎಂಇಎಸ್ ಶಾಲೆಯ ಬೆಳ್ಳಿಹಬ್ಬ ಸಂಭ್ರಮಾಚರಣೆಯಲ್ಲಿ 2ನೇ ದಿನ ಬೆಳ್ಳಿಹಬ್ಬದ ವಿಶೇಷ ಸಂಚಿಕೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ತಮ್ಮ ಮಕ್ಕಳು ಉತ್ತಮ ಅಂಕ ಹಾಗೂ ರ್ಯಾಂಕ್ ಬರಬೇಕೆಂಬ ಭಾವನೆ ಪೋಷಕರಲ್ಲಿರುವುದರಿಂದ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಸಂಸ್ಕಾರದ ಅರಿವಿಲ್ಲದೇ ಸಂಬಂಧಗಳ ಕೊಂಡಿ ಕಳಚುತ್ತಿದೆ. ಈಗೆ ಆದರೆ ಮುಂದಿನ ಪೀಳಿಗೆ ಅಪಾಯಕ್ಕೆ ಸಿಲುಕುತ್ತದೆ. ಹಾಗಾಗಿ ಮಕ್ಕಳಿಗೆ ಸಂಸ್ಕಾರ ಹಾಗೂ ಶಿಸ್ತಿನ ಶಿಕ್ಷಣ ಅಗತ್ಯವಿದೆ ಎಂದು ಹೇಳಿದರು.
8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಶ್ರೀಮಂತ ಭಾಷೆಯೊಂದಿದ್ದರೆ ಅದು ಕನ್ನಡ. ರಾಜ್ಯದಲ್ಲಿ ನಾಡಗೀತೆಯನ್ನು ಪ್ರಾರಂಭ ಮಾಡುವ ಶಾಲೆಗಳಲ್ಲಿ ಕನ್ನಡ ಭಾಷೆಗೆ ಕಂಟಕವಾಗುವ ಜತೆಗೆ ಸರಕಾರಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿರುವುದು ದುರಂತ. ಪಠ್ಯ ಪುಸ್ತಕದಲ್ಲಿ ರಾಜಕೀಯ ಹಸ್ತಕ್ಷೇಪವಾಗುತ್ತಿದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ಈ ನಾಡಲ್ಲಿ ಸಾವಿರಾರು ಶಿಕ್ಷಣ ತಜ್ಞರಿದ್ದಾರೆ. ಅವರ ಮೂಲಕ ಪಠ್ಯ ಪುಸ್ತಕ ತಯಾರಾಗಬೇಕಿದೆ ಎಂದು ಹೇಳಿದರು.
ಮಾಜಿ ಸಚಿವೆ ಡಾ.ಮೋಟಮ್ಮ ಮಾತನಾಡಿ, 1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವ ಬಗ್ಗೆ ಇಡೀ ಭಾರತೀಯರಿಗೆ ಗೊತ್ತಿರುವ ವಿಚಾರ. ಆದರೆ 2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆ ಮಾಡಿದ ಮೇಲೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ನಮ್ಮ ದೇಶದ ಒಬ್ಬ ದೊಡ್ಡ ನಾಯಕರು ಹೇಳುತ್ತಾರೆ. ಇವರು ಸಮಾಜಕ್ಕೆ ಏನು ಸಂದೇಶ ಸಾರಲು ಹೊರಟಿದ್ದಾರೆಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳಿಗೆ ರಾಜಕೀಯ ಮುಖ್ಯವಲ್ಲ. ತಮ್ಮ ಭವಿಷ್ಯದ ಬಗ್ಗೆ ಗುರಿ ಇಟ್ಟುಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯಲು ಶ್ರಮಿಸಬೇಕೆಂದು ಸಲಹೆ ನೀಡಿದರು.
ಖ್ಯಾತ ಹಾಸ್ಯ ಕಲಾವಿದರಾದ ವಿನೋಧ್ ಗೊಬ್ರಗಾಲ, ಚಂದ್ರಪ್ರಭ ಅವರ ಹಾಸ್ಯ ಕಾಮಿಡಿ ಶೊ, ನೆರೆದವರನ್ನು ಮನೋರಂಜಿಸಿದರು. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ, ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್‍ಗೌಡ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಇಎಸ್ ಶಾಲೆ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ವಹಿಸಿದ್ದರು. ನಟಿ ನಿಸರ್ಗ, ಶಾಲೆ ಪ್ರಾಂಶುಪಾಲೆ ಚಿಂತು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ಶಾಲೆಯ ರಜತ ಮಹೋತ್ಸವದಲ್ಲಿ ವಿದ್ಯಾರ್ಥಿಗಳು, ಪೋಷಕರು, ಹಳೇವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.



