ಕಳಸ ತಾಲೂಕು ಕೇಂದ್ರವಾದರೂ ತಾಲೂಕು ಕೇಂದ್ರಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಇನ್ನು ಲಭ್ಯವಾಗಿಲ್ಲ. ಕಳಸ ಹೆಸರಿಗೆ ಮಾತ್ರ ತಾಲೂಕು ಕೇಂದ್ರವಾಗಿದ್ದು ಜನರ ತಾಪತ್ರಯಗಳ ಮಾತ್ರ ತಪ್ಪಿಲ್ಲ
ಎಂದು ಬಿಜೆಪಿ ಮುಖಂಡ ಡಾ. ಶಿವಪ್ರಸಾದ್ ಆರೋಪಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ಕಳಸದಲ್ಲಿ ತಾಲೂಕು ಕಚೇರಿ ಆರಂಭವಾಗಿದ್ದರು ಅಲ್ಲಿನ ಸಿಬ್ಬಂದಿಗಳ ಕೊರತೆಯಿಂದ ರೈತರಿಗೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಬಹುತೇಕ ಕೆಲಸಗಳಿಗೆ ನಿತ್ಯ ಅಲೆದಾಟ ಮಾಡಬೇಕಾಗಿದೆ. ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಇರುವ ಸಿಬ್ಬಂದಿಗಳ ಮೇಲೆ ಕಾರ್ಯದ ಒತ್ತಡ ಹೆಚ್ಚಾಗಿ ಜನರಿಗೆ ಸಕಾಲದಲ್ಲಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನರು ಈಗಲೂ ಮೂಡಿಗೆರೆ ಮತ್ತು ಚಿಕ್ಕಮಗಳೂರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಲ್ಲ.
ಮತ್ತೊಂದೆಡೆ ಕಳಸದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇದ್ದು ಜನರಿಗೆ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ.
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಪರವೂರುಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಿ ಕಳಸ ತಾಲೂಕಿಗೆ ಬೇಕಾಗಿರುವ ಸೂಕ್ತ ಮೂಲಭೂತ ಸೌಕರ್ಯಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಅವರು ಆಗ್ರಹಿಸಿದ್ದಾರೆ



