ಯಾವುದೇ ಅನೈತಿಕ ಚಟುವಟಿಕೆಗೆ ಆಸ್ಪದವಿಲ್ಲ, ಕಾನೂನು ಬಾಹೀರವಾಗಿ ನಡೆದುಕೊಂಡರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಖರಾಯಪಟ್ಟಣ ಪಿಎಸೈ ಕಿರಣ್ ಕುಮಾರ್ ಎಚ್ಚರಿಕೆ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಪೊಲೀಸ್ ಇಲಾಖೆ ಇರುವುದೇ ಸಾರ್ವಜನಿಕರ ರಕ್ಷಣೆಗಾಗಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಕರ್ತವ್ಯವಾಗಿದೆ. ಗ್ರಾಮದಲ್ಲಿ ಯಾವುದೇ ರೀತಿಯ ಅವಘಡ, ಸಣ್ಣ ಪುಟ್ಟ ಘಟನೆಗಳು ಸಂಭವಿಸಿದರೂ ಕೂಡಾ ಜನ ನೇರವಾಗಿ ಪೊಲೀಸರನ್ನ ಸಂಪರ್ಕಿಸಬಹುದು. ಪೊಲೀಸರು ಎಂದಾಕ್ಷಣ ಎಲ್ಲರೂ ಭಯಪಡುವುದು ಬೇಡ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಳ್ಳತನ ದರೋಡೆ ಪ್ರಕರಣಗಳಿಗಿಂತ ಆನ್‌ಲೈನ್ ಫ್ರಾಡ್, ಮನಿಡಬ್ಲಿಂಗ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು.. ಅಪರಿಚಿತರು ಫೋನ್ ನಲ್ಲಿ ಒಟಿಪಿ ಅಥವಾ ಲಿಂಕ್ ಕಳುಹಿಸಿ ತಮ್ಮ ಮಾಹಿತಿ ಅಪ್ಲೋಡ್ ಮಾಡುವಂತೆ ಹೇಳಿದರೆ ಯಾರೂ ಕೂಡಾ ತಮ್ಮ ವೈಯಕ್ತಿಕ ಮಾಹಿತಿಯನ್ನ ಹಂಚಿಕೊಳ್ಳಬೇಡಿ, ಬದಲಾಗಿ ಕರೆ ಮಾಡಿದ ನಂಬರ್ ಬಗ್ಗೆ ಪೊಲೀಸ್ ಠಾಣೆಗೆ ಕೊಡುವ ಮೂಲಕ ವಂಚನೆಗೊಳಗಗುವುದನ್ನ ತಪ್ಪಿಸಬೇಕು. ಹಳ್ಳಿಗಳಲ್ಲಿ ಯಾರಾದರೂ ವ್ಯಾಪಾರ ಮಾಡುವ ನೆಪದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ, ಮಾರುವೇಷದಲ್ಲಿ ಬಂದರೆ ಅಂತವ ಬಗ್ಗೆಯೂ ಕೂಡಲೇ ಬೀಟ್ ಪೊಲೀಸ್ ಸಿಬ್ಬಂದಿ ಅಥವಾ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ಕಾಮೇನಹಳ್ಳಿ ಗ್ರಾಮ ಗಡಿ ಭಾಗದ ಗ್ರಾಮವಾಗಿದ್ದು, ಅಕ್ಕಪಕ್ಕದ ತಾಲೂಕಿನಿಂದ ಬಂದು ಇಸ್ಪೀಟು ಆಡುವವರ ಸಂಖ್ಯೆ ಹೆಚ್ಚಾಗಿದ್ದು. ಸ್ಥಳೀಯರಿಂದ ನಮಗೆ ಮಾಹಿತಿ ಬಂದಿದೆ. ಯಾವುದೇ ಕ್ಷಣದಲ್ಲಿಯಾದ್ರೂ ಅಂತವರನ್ನ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಗ್ರಾಮದ ಮಹಿಳೆಯರು, ಪೋಷಕರು ತಮ್ಮ ಮಕ್ಕಳು ಅಥವಾ ಗಂಡಂದಿರು ಇಸ್ಪೀಟು ಆಡಲು ಹೋಗಿ ಬರ್ಬಾತ್ ಆದರೆ ಅದನ್ನ ನೋಡುವವರು ನೀವುಗಳೇ ಹಾಗಾಗಿ ಯಾರೇ ಇಸ್ಪೀಟು ಆಟವಾಡಲು ಹೋದರೆ ಯಾವುದೇ ಭಯವಿಲ್ಲದೆ ಮಾಹಿತಿ ನೀಡಿ, ಮಾಹಿತಿ ಕೊಟ್ಟವರ ಸುಳಿವು ಗುಪ್ತವಾಗಿಡಲಾಗುತ್ತದೆ ಎಂದು ಭರವಸೆ ನೀಡಿದರು.
ವಾಹನ ಚಾಲನೆ ಮಾಡುವ ಪ್ರತಿಯೊಬ್ಬರೂ ತಮ್ಮ ತಮ್ಮ ವಾಹನಗಳಿಗೆ ಇನ್‌ಶೂರೆನ್ಸ್ ಮಾಡಿಸಿ, ಅಪಘಾತಗಳು ಸಂಭವಿಸಿದಲ್ಲಿ ಅವರ ಆಸ್ಪತ್ರೆಯ ಖರ್ಚು ವೆಚ್ಚಕ್ಕಾದರೂ ವಿಮೆಯ ಹಣ ಸಹಾಯವಾಗುತ್ತದೆ. ಅದರ ಜೊತೆಗೆ ಬೈಕ್ ಓಡಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಅಪಘಾತಗಳನ್ನ ತಪ್ಪಿಸಿ ಎಂದು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಷಣ್ಮುಖಪ್ಪ, ತೋಟಪ್ಪ, ಕೆ.ಎಸ್ ಕುಮಾರ್, ಕೆ.ಎನ್ ಲೋಕೇಶ್, ರವಿ ಕುಮಾರ್, ಶಂಕ್ರಪ್ಪ, ವೇದಮೂರ್ತಿ, ವಿಶ್ವನಾಥ್ ಸಖರಾಯಪಟ್ಟಣ ಠಾಣೆಯ ಸಿಬ್ಬಂದಿಗಳಾದ ಪ್ರಕಾಶ್, ಭಾಸ್ಕರ್, ದಿನೇಶ್, ಸಂದೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



