ಕರ್ತವ್ಯ ಲೋಪ ಆರೋಪದ ಮೇರೆಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕಿತ್ತಲೆಗಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ, ಹಾಲಿ ಸಹಶಿಕ್ಷಕಿಯಾಗಿದ್ದ ಎಚ್ಎಸ್ ಶೀಲರಾಣಿ ಅಮಾನತುಗೊಂಡ ಶಿಕ್ಷಕಿ.
ಶಾಲಾ ಸಮಯದಲ್ಲಿ ಅತಿಯಾದ ಮೊಬೈಲ್ ಬಳಕೆ, ಪಠ್ಯ ಚಟುವಟಿಕೆಗಳಲ್ಲಿ ನಿರುತ್ಸಾಹ, ಬಿಸಿಯೂಟ ಯೋಜನೆಯಲ್ಲಿ ಅವ್ಯವಹಾರ, ಲೆಕ್ಕಪತ್ರಗಳ ತಪ್ಪು ನಿರ್ವಹಣೆ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಶಿಕ್ಷಕಿ ವಿರುದ್ಧ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದು, ತನಿಖೆಯಿಂದ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿವೆ. ಹೀಗಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.




