ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 15 ಎಕರೆ ಕಾಫಿ ತೋಟ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಕುಂದೂರು ಸಮೀಪದ ಕಣೆಗದ್ದೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಣೆಗದ್ದೆ ಗ್ರಾಮದ ಇಳೇಖಾನ್ ಚಂದ್ರು ಎಂಬುವವರ ತೋಟಕ್ಕೆ ಮಂಗಳವಾರ ಬೆಂಕಿ ತಗುಲಿದ್ದು, ಸುಮಾರು 15 ಎಕರೆಯಷ್ಟು ತೋಟ ಸುಟ್ಟು ಹೋಗಿದೆ.
ತೋಟಕ್ಕೆ ಬೆಂಕಿ ಹತ್ತಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು, ಸುತ್ತಮುತ್ತಲಿನ ತೋಟಗಳ ಕಾರ್ಮಿಕರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ನಿಯಂತ್ರಣಕ್ಕೆ ಬಾರದೆ ಹತ್ತಾರು ಎಕರೆ ಕಣ್ಣೆದುರೆ ಸುಟ್ಟು ಹೋಗಿದೆ. ಸಮೀಪದ ತೋಟಗಳಿಗೂ ಬೆಂಕಿ ವ್ಯಾಪಿಸಿ ನಾಲೈದು ಮಂದಿಯ ಕಾಫಿ ತೋಟವನ್ನು ಆಹುತಿ ಪಡೆಯಿತು.

ತೋಟಗಳಿಗೆ ಹೊಂದಿಕೊಂಡಂತೆ ಸಾರಗೋಡು ಮೀಸಲು ಅರಣ್ಯವಿದ್ದು, ಅರಣ್ಯಕ್ಕೆ ಬೆಂಕಿ ತಗುಲುವುದನ್ನು ತಡೆಯಲು ಸಿಬ್ಬಂದಿ ಹಾಗೂ ಸಾರ್ವಜನಿಕರು ಹರಸಾಹಸಪಟ್ಟರು. ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಎರಡು ಗಂಟೆಗೂ ಹೆಚ್ಚುಕಾಲ ಕಾರ್ಯಚರಣೆ ನಡೆಸಿದ ನಂತರ ಬೆಂಕಿ ನಿಯಂತ್ರಣಕ್ಕೆ ಬಂತು. ಆದರೆ, ಅಷ್ಟರಲ್ಲಾಗಲೇ ಲಕ್ಷಾಂತರ ಮೌಲ್ಯದ ಕಾಫಿ ತೋಟ ಭಸ್ಮವಾಗಿತ್ತು.
“ತೋಟಕ್ಕೆ ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಯಾವುದೇ ದೂರು ಬಂದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.



