ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿಯಲ್ಲಿರುವ “ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ” ಮಠದ ಪೀಠಕ್ಕೆ ಉತ್ತರಾಧಿಕಾರಿಗಳಾಗಿರುವ ‘ಜಗದ್ಗುರು ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮಿ’ಯವರು ಸನ್ಯಾಸ ದೀಕ್ಷೆ ಪಡೆದ ನಂತರ ಇದೇ ಪ್ರಪ್ರಥಮ ಬಾರಿಗೆ ಚಿಕ್ಕಮಗಳೂರು ಜಿಲ್ಲೆಗೆ ಮಾರ್ಚ್ 1ರಂದು ನಗರದಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರಿನ “ವಿಶ್ವಮಾನ್ಯ” ಕಛೇರಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ಭಕ್ತಾದಿಗಳು, ಸಮುದಾಯ ಬಾಂಧವರು, ಪೂರ್ವಾಶ್ರಮದ ಸಹೋದ್ಯೋಗಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರಿಗೆ ಆಶೀರ್ವಚನ ನೀಡಿದರು.
ಈ ಹಿಂದೆ ಪೂರ್ವಾಶ್ರಮದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಿರಿಯ ಶ್ರೇಣಿಯ ಕಂದಾಯ ಉಪ ವಿಭಾಗಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದು ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಬಗೆಹರಿಯದ ಸಮಸ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಪ್ರಸಕ್ತ ಅವಧಿಯ ಆಹಾರ, ಶಿಕ್ಷಣ, ಕುಡಿಯುವ ನೀರು, ಪರಿಸರ ಸಂರಕ್ಷಣೆ, ಸಂಚಾರಿ ವ್ಯವಸ್ಥೆಗಳ ಸಮಸ್ಯೆಗಳನ್ನೂ ಸೇರಿದಂತೆ ಹತ್ತು ಹಲಾವರು ವಿಚಾರವಾಗಿ ಸುಧೀರ್ಘವಾಗಿ ಮಾತನಾಡಿದ ಶ್ರೀಗಳವರು ಜಿಲ್ಲೆಯಲ್ಲಿನ ಇನ್ನಿತರ ತಾಲ್ಲೂಕುಗಳ ಕೆರೆಗಳ ಉನ್ನತೀಕರಿಸುವ – ಅಭಿವೃದ್ಧಿಗೊಳಿಸುವ ಬಗ್ಗೆ ಗಮನಹರಿಸಿ ನಮ್ಮ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು.
“ವಿಷನ್ ಚಿಕ್ಕಮಗಳೂರು ಟ್ರಸ್ಟ್ (ರಿ)” ಇದರ ಗೌರವಾಧ್ಯಕ್ಷರೂ ಆಗಿರುವ ಶ್ರೀಗಳವರು ಸುಮಾರು ನಾಲ್ಕೈದು ವರ್ಷಗಳ ಹಿಂದೆ ಒಂದು ಒಳ್ಳೆಯ ಉದ್ದೇಶದಿಂದ ಆರಂಭವಾದ ಟ್ರಸ್ಟ್ ವತಿಯಿಂದ ಈಗಾಗಲೇ ಪುನಶ್ಚೇತನಗೊಳಿಸಿ ಸಾರ್ವಜನಿಕ ಬಳಕೆಗೆ ತೆರವಾಗಿಟ್ಟಿರುವ ಕೆರೆಗಳನ್ನು ಉನ್ನತೀಕರಿಸುವ ಹಾಗೂ ಸಾಮಾಜಿಕ – ಸಮುದಾಯದ ಪ್ರಗತಿಯ ಕೆಲಸಗಳನ್ನು ಕೈಗೊಳ್ಳಲು ಅಗತ್ಯ ಕ್ರಮ ವಹಿಸುವಂತೆ ‘ವಿಷನ್ ಚಿಕ್ಕಮಗಳೂರು ಟ್ರಸ್ಟ್ (ರಿ)’ನ ಟ್ರಸ್ಟಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿನ ಉತ್ಸುಕ ಯುವಕರು, ಸಂಪನ್ಮೂಲ ವ್ಯಕ್ತಿಗಳು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವ ಪ್ರಗತಿಪರರು – ಚಿಂತಕರುಗಳನ್ನು ಗುರುತಿಸಿ ಅವರುಗಳ ಸೇವೆ, ಸಹಕಾರದಿಂದ ಜಿಲ್ಲೆಯಾದ್ಯಂತ ತಾಲ್ಲೂಕುವಾರು ಘಟಕಗಳನ್ನು ರಚಿಸಿ ಆಯಾ ಭಾಗದ ಜನರ ಸಮಸ್ಯೆಗಳಿಗೂ ಸ್ಪಂದಿಸುವ ಮತ್ತು ಬಗೆಹರಿಸುವ ನಿಟ್ಟಿನಲ್ಲಿ ಮುಂದುವರೆಯಲು ಅಗತ್ಯ ಸಲಹೆ ಸೂಚನೆ ಹಾಗೂ ಸಹಕಾರ ನೀಡಲು ’ವಿಷನ್ ಚಿಕ್ಕಮಗಳೂರು ಟ್ರಸ್ಟ್’ ಮೇಲ್ಪಂಕ್ತಿಯಲ್ಲಿರುವಂತೆ ಬೆಳೆಸಿಕೊಂಡು ಹೋಗಬೇಕು ಎಂದು ಆಶೀರ್ವದಿಸಿದರು.

’ವಿಶ್ವಮಾನ್ಯ’ ಕಛೇರಿಯ ವಿಶಾಲವಾದ ಕೊಠಡಿಯೊಂದನ್ನು “ವಿಷನ್ ಚಿಕ್ಕಮಗಳೂರು ಟ್ರಸ್ಟ್” ಸಂಸ್ಥೆಯ ಕಾರ್ಯಕಲಾಪಗಳಿಗೆ ಬಿಟ್ಟು ಕೊಟ್ಟಿರುವುದನ್ನು ಶ್ಲಾಘಿಸಿದರು.
ರೈತರ ಬೆಳೆ – ಬೆಲೆಯ ಬಗ್ಗೆ, ನೀರಿನ ಬಳಕೆಯ ಬಗ್ಗೆ, ಅಕ್ಷರ ಕ್ರಾಂತಿ, ಜಲಸಾಕ್ಷರತೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
“ವಿಶ್ವಮಾನ್ಯ” ಪತ್ರಿಕೆಯು ಬಹಳ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದ್ದು ಸಂಚಿಕೆಯಿಂದ ಸಂಚಿಕೆಗೆ ಸಾವಿರಾರು ಓದುಗರನ್ನು ಸೆಳೆಯುತ್ತಿರುವುದು ನಿಜಕ್ಕೂ ಸಂತೋಷಕರ ವಿಚಾರ. ಮುಂದಿನ ದಿನಗಳಲ್ಲಿ ಸಹೃದಯಿ ಓದುಗರ ಸಂಖ್ಯೆಯು ಸಾವಿರದಿಂದ ಲಕ್ಷಾಂತರ ಜನರಿಗೆ ತಲುಪಲೆಂದು ಹರಸಿ ಹಾರೈಸಿದರು.
ಈ ಸಂದರ್ಭದಲ್ಲಿ ’ವಿಶನ್ ಚಿಕ್ಕಮಗಳೂರು ಟ್ರಸ್ಟ್’ನ ಕಾರ್ಯಾಧ್ಯಕ್ಷ ಪ್ರದೀಪ್ ಗೌಡ, ಉಪಾಧ್ಯಕ್ಷ ಮಂಜುನಾಥ್ ಜಿ. ಪಿ, ಕಾರ್ಯದರ್ಶಿ ಪ್ರಕಾಶ್ ಆರಾಧ್ಯ, ಕೆ. ಕೆ. ಮನುಕುಮಾರ್, ಚಂದ್ರಶೇಖರ ನಾರಣಾಪುರ, ಡಾ. ಹೆಬ್ಬಾರ್, ಸಿ. ನವೀನ್ ಕುಮಾರ್, ವರದ ರಾಜ್ ಅರಸ್ ಅವರುಗಳೊಂದಿಗೆ ‘ವಿಶ್ವಮಾನ್ಯ’ ಪತ್ರಿಕೆಯ ಸ್ಥಾನಿಕ ಸಂಪಾದಕ ಪ್ರಸನ್ನ ಗೌಡ, ಪ್ರಸರಣ ವಿಭಾಗದ ಮುಖ್ಯಸ್ಥ ಶ್ಯಾಮ್ ಸುಂದರ್ ಗೌಡ ಮತ್ತಿತರರು ಉಪಸ್ಥಿತರಿದ್ದರು.


