ಮಲೆನಾಡಿನ ಜಾನಪದ ಕಲೆಗಳನ್ನು ಉಳಿಸುವ ದೃಷ್ಟಿಯಿಂದ ಕಳೆದ 25 ವರ್ಷದ ಹಿಂದೆ ಮಿತ್ರ ಜಾನಪದ ಕಲಾ ಸಂಘ ಸ್ಥಾಪಿಸಲಾಗಿದ್ದು, ಇದೀಗ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನಲೆಯಲ್ಲಿ ಮಾ 16ರಂದು ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಮಟ್ಟದ ಯುವಜನ ಮೇಳ-2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಿತ್ರ ಜಾನಪದ ಕಲಾ ಸಂಘದ ಕಾರ್ಯದರ್ಶಿ ಬಕ್ಕಿ ಮಂಜು ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವಜನ ಮೇಳದಲ್ಲಿ ಲಾವಣಿ ಸ್ಪರ್ಧೆಯಲ್ಲಿ ಯುವಕ ಯುವತಿಯರ ವಯಕ್ತಿಕವಾಗಿ ಭಾಗವಹಿಸಬಹುದು. ಉಳಿದಂತೆ ಭಜನೆ, ಗೀಗಿ ಪದ, ಸೋಬಾನೆ ಪದ, ಜಾನಪದ ಗೀತೆ, ಜಾನಪದ ನೃತ್ಯ, ನಿಶಾನಿ ವಾದ್ಯ ಸ್ಪರ್ಧೆಗೆ ಯುವಕ ಯುವತಿಯರ ತಂಡ ಭಾಗವಹಿಸಲಿದೆ. ಎಲ್ಲಾ ಸ್ಪರ್ಧೆಯಲ್ಲಿ ನಾಡಿನ ಜಾನಪದ ಸಂಸ್ಕøತಿ ಮತ್ತು ಕರ್ನಾಟಕದ ಸಂಪ್ರದಾಯ ಪ್ರತಿಬಿಂಬಿಸುವಂತೆ ಹಾಗೂ ಸ್ಪರ್ಧೆಗೆ ಅನುಗುಣವಾಗಿ ವೇಷ ಭೂಷಣ ಧರಿಸುವ ಮಾರ್ಗದರ್ಶನ ನೀಡಲಾಗಿದೆ. ಅಲ್ಲದೇ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಸಂಘದ ಸದಸ್ಯ ಕೆ.ಸಿ.ಚಂದ್ರಶೇಖರ್ ಮಾತನಾಡಿ, 2019ರಲ್ಲಿ ಕೋವಿಡ್ ಸಂದರ್ಭದಲ್ಲಿ ಸರಕಾರ ಯುವಜನೋತ್ಸವ ಹಾಗೂ ಯುವಜನ ಮೇಳವನ್ನು ರದ್ದುಪಡಿಸಿದ್ದು, ಮತ್ತೆ ಪುನರಾರಂಭಿಸಲು ಇದೂವರೆಗೂ ಮುಂದಾಗದಿರುವುದು ಖಂಡನೀಯ. ಇದರಿಂದ ಜನಪದ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶದಿಂದ ವಂಚಿತರಾಗಿದ್ದಾರೆ. ಹಾಗಾಗಿ ದಾನಿಗಳ ನೆರವಿನಿಂದ ಯುವಜನ ಮೇಳ ನಡೆಸಲು ನಮ್ಮ ಸಂಘ ಮುಂದಾಗಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ಜನಪದ ಕಲಾವಿದರು ಬಳಸಿಕೊಳ್ಳಬೇಕು ಎಂದರು
ಸ್ಪರ್ಧೆಗೆ ಭಾಗವಹಿಸುವ ತಂಡಗಳು ಒಂದು ವಾರದ ಮುಂಚಿತವಾಗಿ ನೊಂದಾಯಿಸಿಕೊಳ್ಳಲು 9448667558, 6360446648 ಸಂಖ್ಯೆಗೆ ಸಂಪರ್ಕಿಸಬೇಕೆಂದು ಮನವಿ ಮಾಡಿದರು.
ಸಂಘದ ಸದಸ್ಯರಾದ ಸುನೀಲ್ ಹಂತೂರು, ಶಶಿಕುಮಾರ್ ಜೇನುಬೈಲ್ ಉಪಸ್ಥಿತರಿದ್ದರು.


