ಮಹಿಳೆಯರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ಮಹಿಳೆ ಆರೋಗ್ಯವಂತಳಾಗಿದ್ದರೆ ಇಡೀ ಕುಟುಂಬದ ಆರೋಗ್ಯ ರಕ್ಷಣೆ ಸಾಧ್ಯ ಎಂದು ಮೂಡಿಗೆರೆ ಹೊಯ್ಸಳ ಹೆಲ್ತ್ ಕೇರ್ ನ ಡಾ. ಗ್ರೀಷ್ಮ ಹೇಳಿದರು.
ಅವರು ಶನಿವಾರ ಮೂಡಿಗೆರೆ ಜೇಸಿ ಭವನದಲ್ಲಿ ಲೇಡಿ ಜೇಸಿಐ ವಿಭಾಗದಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು. ಇಂದಿನ ಆಧುನಿಕ ಜೀವನ ಪದ್ಧತಿ ಮತ್ತು ಆಹಾರ ಪದ್ಧತಿಯಿಂದ ಮಹಿಳೆಯ ಆರೋಗ್ಯದ ಮೇಲೆ ಅನೇಕ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೆಲಸದ ಒತ್ತಡ, ಸಂಸಾರದ ಒತ್ತಡದ ಕಾರಣದಿಂದ ಮಹಿಳೆ ತನ್ನ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾಳೆ. ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಗಳು ಅಂತಿಮ ಹಂತಕ್ಕೆ ಬರುವ ತನಕ ಮಹಿಳೆಗೆ ಅದರ ಅರಿವು ಇರುವುದಿಲ್ಲ. ಗರ್ಭಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಂದ ಮಹಿಳೆಯರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗದೇ ಇರುವುದು. ಮಹಿಳೆಯರು ನಿಯಮಿತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಅರಿತು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಜೀವ ಅಪಾಯದಿಂದ ಪಾರಾಗಬಹುದು. ಮನಸ್ಸನ್ನು ಸದಾ ಸಕಾರಾತ್ಮಕ ಸ್ಥಿತಿಯಲ್ಲಿ ಇಟ್ಟುಕೊಂಡು ಒತ್ತಡ ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವ ಮೂಲಕ, ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಯಿಂದ ಪಾರಾಗಬಹುದು ಎಂದರು.

ಲೇಡಿ ಜೇಸಿ ವಿಭಾಗದ ವಲಯ ನಿರ್ದೇಶಕಿ ಮಾಯಾ ಗಿರೀಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ; ಮಹಿಳೆಯರು ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪುರುಷನಿಗೆ ಸಮಾನಾಗಿ ಮತ್ತು ಪರುಷನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸಾಧನೆ ತೋರುತ್ತಿದ್ದಾಳೆ. ಸಿಗುವ ಸಣ್ಣ ಸಣ್ಣ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಜೀವನದಲ್ಲಿ ತನ್ನದೇ ಯಶಸ್ಸಿನ ಛಾಪು ಮೂಡಿಸಲು ಪ್ರಯತ್ನಿಸಬೇಕು. ಜೇಸಿಐ ಸಂಸ್ಥೆಯು ಮಹಿಳೆಯರಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಡುತ್ತಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಲೇಡಿ ಜೇಸಿ ವಿಭಾಗವನ್ನು ಪ್ರಾರಂಭಿಸಿ ಪ್ರೋತ್ಸಾಹ ನೀಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಸೇವೆ ಸಲ್ಲಿಸುತ್ತಿರುವ ಭಾರತೀಬೈಲ್ ಕಸ್ತೂರಿಭಾ ಟ್ರಸ್ಟ್ ನ ಹಿರಿಯ ಶಿಕ್ಷಕಿ ಮಧುರ, ರೈತ ಮಹಿಳೆ ಯಶೋದಮ್ಮ ಮಲ್ಲೇಶ್ ಫಲ್ಗುಣಿ, ನಿವೃತ್ತ ಶುಶ್ರೂಷಕಿ ಹೇಮಾವತಿ ರುದ್ರಯ್ಯ, ಆಶಾ ಕಾರ್ಯಕರ್ತೆ ಮಣಿ ಬೆಟ್ಟಗೆರೆ, ಕಲಾವಿದೆ ನವ್ಯ ಅಜಿತ್ ಕ್ಸೇವಿಯಾರ್ ಇವರುಗಳನ್ನು ಗೌರವಿಸಲಾಯಿತು.
ಮೂಡಿಗೆರೆ ಲೇಡಿ ಜೇಸಿ ವಿಭಾಗದ ಅಧ್ಯಕ್ಷೆ ರೇಖಾ ನಾಗರಾಜ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದರು. ಮೂಡಿಗೆರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ, ಜೇಸಿಐ ಕಾರ್ಯದರ್ಶಿ ಹಮೀದ್ ಪಿ.ಕೆ., ಲೇಡಿ ಜೇಸಿ ಕಾರ್ಯದರ್ಶಿ ಮೇಘ ವಿಕಾಸ್, ನಿಕಟಪೂರ್ವ ಅಧ್ಯಕ್ಷೆ ದಿವ್ಯ ಸುಪ್ರೀತ್, ಕಾರ್ಯಕ್ರಮ ನಿರ್ದೇಶಕಿ ರೇಖಾ ರವಿರಾಜ್, ಜೂನಿಯರ್ ಜೇಸಿ ಅಧ್ಯಕ್ಷೆ ಪ್ರಶಂಸಾ, ಕಾರ್ಯದರ್ಶಿ ಇಶಾನಿ ಇದ್ದರು.



