ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಮತ್ತೊಂದು ಜೀವ ಕಾಡಾನೆಗೆ ಬಲಿಯಾಗಿದೆ. ಬೇಲೂರು ತಾಲ್ಲೂಕಿನಲ್ಲಿ ಕಾಡಾನೆಯಿಂದ ಸಂಭವಿಸುತ್ತಿರುವ ಸರಣಿ ಸಾವುಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಬೇಲೂರು ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ರೈತ ಮಹಿಳೆಯನ್ನು ಕಾಡಾನೆ ತುಳಿದು ಸಾಯಿಸಿದೆ.
ಶುಕ್ರವಾರ ಮಧ್ಯಾಹ್ನ ತಮ್ಮ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಸುಶೀಲಮ್ಮ (60 ವರ್ಷ) ಎಂಬ ರೈತ ಮಹಿಳೆಯನ್ನು ಕಾಡಾನೆ ದಾರುಣವಾಗಿ ಸಾಯಿಸಿದೆ.

ಸುಶೀಲಮ್ಮ ಅವರನ್ನು ಸೊಂಡಿಲಿನಿಂದ ಎತ್ತಿ ಎಸೆದಿರುವ ಆನೆ ನಂತರ ಅವರ ತಲೆಯನ್ನು ಕಾಲಿನಿಂದ ತುಳಿದು ಛಿದ್ರಗೊಳಿಸಿದೆ.
ಮೃತ ಮಹಿಳೆಯ ಶವವನ್ನು ಕಾಫಿ ತೋಟದ ಗುಂಡಿಗೆ ಹಾಕಿ ಶವದ ಮೇಲೆ ಪ್ಲಾಸ್ಟಿಕ್ ಚೀಲವನ್ನು ಮುಚ್ಚಿಟ್ಟಿರುವುದು ಕಂಡು ಬಂದಿದೆ.

ಬೇಲೂರು ತಾಲ್ಲೂಕಿನ ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರೇಹಳ್ಳಿ ಭಾಗದಲ್ಲಿ ಕಳೆದ ಕೆಲ ತಿಂಗಳ ಅವಧಿಯಲ್ಲಿ ಇದು ನಾಲ್ಕನೇ ಜೀವ ಕಾಡಾನೆಗೆ ಬಲಿಯಾಗಿದೆ.
ಘಟನೆಯಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಾರದಂತೆ ಕಲ್ಲು ತೂರಾಟ ನಡೆಸಿದ್ದಾರೆ.



