ಸರಕಾರವೇ ನೀಡಿದ ಸಾಗುವಳಿ ಜಮೀನಿನ ದಾಖಲೆಗಳನ್ನು ಉಪವಿಭಾಗಾಧಿಕಾರಿಗಳ ಮಟ್ಟದಲ್ಲಿ ವಜಾಗೊಳಿಸಲಾಗುತ್ತಿದೆ. ಈ ಪ್ರಕ್ರಿಯೆ ಕೂಡಲೇ ಸರಕಾರ ನಿಲ್ಲಿಸಬೇಕೆಂದು ಒತ್ತಾಯಿಸಿ ರೈತ ಹಿತರಕ್ಷಣೆ ವೇದಿಕೆ ಮುಖಂಡರು ಹಾಗೂ ನೂರಾರು ಮಂದಿ ರೈತರು ಭಾನುವಾರ ಮೂಡಿಗೆರೆ ಶಾಸಕರ ಕಚೇರಿಗೆ ಆಗಮಿಸಿ, ಶಾಸಕಿ ನಯನಾ ಮೋಟಮ್ಮ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮೂಡಿಗೆರೆ ಹಾಗೂ ಕಳಸ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ರೈತರಿಗೆ ಫಾರಂ ನಂ 50 ಮತ್ತು 53 ಅಡಿಯಲ್ಲಿ ಜಮೀನು ಮಂಜೂರು ಮಾಡಿಕೊಡಲಾಗಿತ್ತು. ಭೂಮಿ ಮಂಜೂರು ಪ್ರಕ್ರಿಯೆಯಲ್ಲಿ ಕೆಲ ಅಧಿಕಾರಿಗಳು ಅಕ್ರಮ ಎಸಗಿದ್ದಾರೆಂಬ ಕಾರಣಕ್ಕೆ ಮಂಜೂರಾದ ಎಲ್ಲಾ ದಾಖಲಾತಿಗಳನ್ನು ಸಾರಾಸಗಟಾಗಿ ವಜಾಗೊಳಿಸಲಾಗುತ್ತಿದೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ಅವರಿಗೆ ಶಿಕ್ಷೆ ಕೊಡುವುದು ಬಿಟ್ಟು, ಯಾವುದೇ ತಪ್ಪು ಮಾಡದ ರೈತರ ಮೇಲೆ ಗದಪ್ರಹಾರ ಮಾಡಲಾಗುತ್ತಿದೆ. ರೈತರಿಂದ ನಿಯಮ ಪ್ರಕಾರವೇ ಸರಕಾರ ನಿಗದಿಪಡಿಸಿದ ಶುಲ್ಕ ಕಟ್ಟಿಸಿಕೊಂಡು ಭೂಮಿಯನ್ನು ಮಂಜೂರು ಮಾಡಿಕೊಡಲಾಗಿದೆ. ಇದೀಗ ಅಧಿಕಾರಿಗಳು ಕೈಗೊಳ್ಳುತ್ತಿರುವ ವಜಾ ಪ್ರಕ್ರಿಯೆ ರೈತರನ್ನು ಸಂಕಷ್ಟದ ಸುಳಿಗೆ ಸಿಲುಕಿಸುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹತ್ತಾರು ಎಕರೆ ಜಮೀನು ಇದ್ದರೂ ಅಕ್ರಮವಾಗಿ ಅಧಿಕಾರಿಗಳಿಗೆ ಹಣ ನೀಡಿ ಮತ್ತೆ ಜಮೀನು ಪಡೆದಿದ್ದ ಅರ್ಜಿಯನ್ನು ವಜಾಗೊಳಿಸಿದರೆ ನಮ್ಮದು ತಕರಾರು ಇಲ್ಲ. ಆದರೆ ಆಸ್ತಿ ಇಲ್ಲದೇ ಅರ್ಹ ಫಲಾನುಭವಿಗಳ ಅರ್ಜಿಯನ್ನು ಕೂಡ ವಜಾಗೊಳಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುವುದು ಅನಿವಾರ್ಯವಾಗುತ್ತದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರನ್ನು ಹೊಣೆಗಾರರನ್ನಾಗಿಸಿ ಅವರ ಜಮೀನು ಮಂಜೂರಾತಿಯನ್ನು ವಜಾಗೊಳಿಸಲಾಗುತ್ತಿದೆ.
ಇದು ಕ್ಷೇತ್ರದ ಸಾವಿರಾರು ರೈತರ ಬದುಕಿನ ಪ್ರಶ್ನೆಯಾಗಿದೆ. ಹಾಗಾಗಿ ತಾವು ಮುಖ್ಯಮಂತ್ರಿ ಬಳಿಗೆ ರೈತರ ನಿಯೋಗ ಕರೆದೊಯ್ದು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಬಳಿಕ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಹಿಂದೆ ಕಂದಾಯ ಇಲಾಖೆ ಮೂಲಕ ಮಂಜೂರಾಗಿದ್ದ ಜಮೀನಿನ ಬಗ್ಗೆ ಅರಣ್ಯ ಇಲಾಖೆ ಅಭಿಪ್ರಾಯ ಪಡೆದಿಲ್ಲ. ಮೂಡಿಗೆರೆ ಮತ್ತು ಕಡೂರು ಭಾಗದಲ್ಲಿ ಮಂಜೂರಾತಿಯಲ್ಲ ಅಕ್ರಮ ಎಸಗಲಾಗಿದೆ ಎಂದು ವಿಚಾರಣೆ ನಡೆದು 2016 ರಿಂದ 2022ರ ನಡುವೆ ಮಂಜೂರಾದ ಎಲ್ಲಾ ದಾಖಲೆಗಳನ್ನು ಟ್ರಸರಿಯಲ್ಲಿ ಇಡಲಾಗಿದೆ. ನಾನಾ ಕಾರಣದಿಂದ ಮಂಜೂರಾತಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಪರಿಶೀಲನೆ ನಡೆಯುತ್ತಿದೆ. ಸದ್ಯದಲ್ಲೇ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಅಂತ್ಯಗೊಳ್ಳುತ್ತದೆ. ಇದರಿಂದ ತಕ್ಕಮಟ್ಟಿಗೆ ಸಮಸ್ಯೆ ಬಗೆಹರಿಯಲಿದೆ. ವಜಾಗೊಳಿಸಿರುವ ಅರ್ಜಿದಾರರಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ನನ್ನ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಅಕ್ರಮ ಸಕ್ರಮ ಸಮಿತಿ ಈಗಾಗಲೇ ಮೂರು ಸಭೆಗಳನ್ನು ನಡೆಸಲಾಗಿದೆ. ಫಾರಂ ನಂ 57 ನಲ್ಲಿ ಪ್ಲಾಂಟೇಷನ್ ಜಮೀನು ಮಂಜೂರಿಗೆ ಅವಕಾಶ ನೀಡಿಲ್ಲ. ಇದು ನನ್ನ ಗಮನಕ್ಕೆ ಬಂದ ನಂತರ ಇದನ್ನು ಕಂದಾಯ ಸಚಿವರು ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿಯವರ ಗಮನಕ್ಕೆ ತಂದಿದ್ದೇನೆ. ಇದರ ಬಗ್ಗೆ ಸಂಪುಟದಲ್ಲಿ ಮತ್ತು ಸದನದಲ್ಲಿ ಚರ್ಚೆ ನಡೆದು ತಿದ್ದುಪಡಿ ಆಗಬೇಕು. ನಾನು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ರೈತ ಹಿತರಕ್ಷಣೆ ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್ಕುಮಾರ್, ಕಾರ್ಯದರ್ಶಿ ಸುರೇಂದ್ರ ಹ್ಯಾರಗುಡ್ಡೆ, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಮುಖಂಡರಾದ ಜ್ವಾಲನಯ್ಯ ಕಳಸ, ಬಿ.ಎಸ್.ಜಯರಾಂ, ಹೆಚ್.ಜಿ.ಸುರೇಂದ್ರ, ಎ.ಜೆ.ಸುಬ್ರಾಯಗೌಡ, ಕೆ.ಆರ್. ಸುಂದರೇಶ್, ಲಕ್ಷ್ಮಣ್ಗೌಡ ಬಾಳೂರು, ರೆಹಮಾನ್, ವಿಕ್ರಂ ಗುತ್ತಿಹಳ್ಳಿ, ಬಕ್ಕಿ ಪ್ರಸಾಧ್, ಎಸ್.ಪಿ.ರಾಜು ಸೇರಿದಂತೆ ನೂರಾರು ಮಂದಿ ರೈತರು ಉಪಸ್ಥಿತರರಿದ್ದರು.


