ಕರ್ನಾಟಕದ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಬಸವರಾಜ್ ಹೊರಟ್ಟಿ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ರವಾನಿಸಿದ್ದು, ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ ಸಭಾಪತಿ ಹುದ್ದೆಯಿಂದ ಮುಕ್ತಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸದಸ್ಯರ ವರ್ತನೆಯು ಸರಿಯಿಲ್ಲ. ಹಾಗಾಗಿ, ನಾನು ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬಸವರಾಜ ಹೊರಟ್ಟಿ ಇಂದು ಬೆಳಗ್ಗೆ ಅಷ್ಟೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗಾಗಲೇ ಅವರು ರಾಜೀನಾಮೆ ಪತ್ರವನ್ನು ಉಪಸಭಾಪತಿಗೆ ರವಾನಿಸಿರುವುದು ಬೆಳಕಿಗೆ ಬಂದಿದೆ.
ಅವರು ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ರವಾನಿಸಿರುವುದು ಬೆಳಕಿಗೆ ಬಂದಿದೆ. ಹೌದು..ಮಾರ್ಚ್ 18ರಂದೇ ಹೊರಟ್ಟಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಾಣೇಶ್ ಅವರಿಗೆ ಕಳುಹಿಸಿದ್ದು, ದಿನಾಂಕ 1-4-25ರಂದು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದು, ಸದರಿ ರಾಜೀನಾಮೆಯನ್ನು 31-3-25ರೊಳಗೆ ಸ್ವೀಕರಿಸಿ ದಿನಾಂಕ 1-4-2025ರಿಂದ ಅನ್ವಯವಾಗುವಂತೆ ಕ್ರಮಕೈಗೊಂಡು ಹಾಗೂ ನನ್ನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೊರಟ್ಟಿ ತಮ್ಮ ರಾಜೀನಾಮೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಳಗ್ಗೆ ಅಷ್ಟೇ ರಾಜೀನಾಮೆ ಬಗ್ಗೆ ಮಾತನಾಡಿದ್ದ ಹೊರಟ್ಟಿ
ಮಾ. 23ರಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾಡಿರುವ ಹೊರಟ್ಟ, ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಹಾಗೂ ನಾನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಇಂದಿನ ದಿನಗಳಲ್ಲಿ ಸದನಗಳನ್ನು ನಿರ್ವಹಿಸುವುದು ಕಷ್ಟ ಎಂಬುದು ಅರ್ಥವಾಗಿದೆ. ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.
ಸದನದಲ್ಲಿ ನಡೆಯುತ್ತಿರುವ ಘಟನೆಗಳಿಂದ ನನಗೆ ಬೇಜಾರಾಗಿದೆ. ಸಭಾಪತಿಗೆ ಹೇಳೋದಿಲ್ಲ ಕೇಳೋದಿಲ್ಲ. ಸದನದೊಳಗೆ ಪ್ರತಿಭಟನೆ ನಡೆಸುತ್ತಾರೆ. ಪರಿಷತ್ಗೆ ಪ್ಲೇ ಕಾರ್ಡ್‌ಗಳನ್ನು ತೆಗೆದುಕೊಂಡು ಬರುತ್ತಾರೆ. ಸದನ ನಡೆಸುವುದಕ್ಕೆ ನನಗೆ ಯೋಗ್ಯತೆ ಇಲ್ಲ. ಮೊನ್ನೆ ನಾನು 17 ನಿಮಿಷ ಸುಮ್ಮನೆ ಕುಳಿತ್ತಿದ್ದೆ. ಇದರಿಂದ ನಾನು ಸದನದಲ್ಲಿ ಇರಬಾರದು ಎಂದು ತೀರ್ಮಾನ ಮಾಡಿದ್ದೇನೆ. 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಸದನದಲ್ಲಿ ಯಾರೂ ಗೌರವ ಕೊಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.



