ಶಿಕ್ಷಣ ಇರುವುದು ಕೇವಲ ಸರ್ಕಾರಿ ಕೆಲಸಕ್ಕಾಗಿ ಅಲ್ಲ, ಮುಂದೆ ಉತ್ತಮ ಬದುಕನ್ನು ರೂಪಿಸಲು ಶಿಕ್ಷಣದ ಅವಶ್ಯಕತೆ ಇದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಕಿವಿ ಮಾತು ಹೇಳಿದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಕಾರ್ಮಿಕರ ಸಂಘ ಶುಕ್ರವಾರ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಪಡೆದವರಿಗೆ ಬದುಕಲು ನೂರಾರು ದಾರಿಗಳು ಇವೆ ಎಂದರು.
ದುಡಿಮೆಯಲ್ಲಿನ ಒಂದಿಷ್ಟು ಹಣವನ್ನು ಕೂಡಿಡಬೇಕು, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಬೇಕು. ನೀವುಗಳು ಶ್ರಮ ಜೀವಿಗಳು, ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರೆ ಮುಂದೆ ಅವರುಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಕಾರ್ಮಿಕರ ಹಕ್ಕು ಪ್ರತಿಪಾದನೆ ಮಾಡಲು ಕಾರ್ಮಿಕರ ದಿನಾಚರಣೆಯನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಯಿತು, ರೈತರು ಈ ದೇಶದ ಬೆನ್ನೆಲುಬು ಎನ್ನುತ್ತೇವೆ. ಹಾಗೆಯೇ ಕಾರ್ಮಿಕರು ಈ ದೇಶದ ಬೆನ್ನೆಲುಬು. ಎಲ್ಲಾ ವಿಭಾಗಗಳಲ್ಲೂ ಕಾರ್ಮಿಕರಿದ್ದಾರೆ, ಎಲ್ಲಾ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಲು ದಿನಾಚರಣೆಯನ್ನು ಮಾಡಲಾಗುತ್ತಿದೆ ಎಂದರು.
ಎಲ್ಲರಿಗೂ ಉತ್ತಮವಾದ ವೇತನ ಸಿಗಲಿ, ಕೆಲಸದ ವಾತಾವರಣ ಇರಲಿ, ಸಾಮಾಜಿಕ ಭದ್ರತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಈ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ ಎಂದ ಅವರು, ಒಗ್ಗಟ್ಟು ಮತ್ತು ಸಾಮಾಜಿಕ ನ್ಯಾಯ ಕಾರ್ಮಿಕರಿಗೆ ಸಿಗಬೇಕು ಎಂದು ಹೇಳಿದರು.
ಹಕ್ಕು ಪತ್ರ ಪರಿಶೀಲಿಸಿ – ನಿಮಗೆ, ಹಕ್ಕುಪತ್ರ ಕೊಡಲಾಗಿದೆಯಾ, ಪರಿಶೀಲನೆ ಮಾಡಿಕೊಳ್ಳಿ. ಏಕೆಂದರೆ ತುಂಬಾ ಹಕ್ಕು ಪತ್ರಗಳಲ್ಲಿ ಸರಿಯಾದ ದಾಖಲೆಗಳು ಇಲ್ಲ, ಪತ್ರಗಳನ್ನು ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿ ಪರಿಶೀಲಿಸಿ, ಅದಕ್ಕೆ ಬೇಕಾದ ಪೂರಕದ ದಾಖಲೆಗಳನ್ನು ನಾನು, ನಮ್ಮ ಸರ್ಕಾರ ಒದಗಿಸಿ ಕೊಡಲಿದೆ ಎಂದ ಶಾಸಕರು, ನಿವೇಶನ ರಹಿತ ಕಾರ್ಮಿಕರ ಪಟ್ಟಿಯನ್ನು ಸಿದ್ಧಪಡಿಸಿ ತೆಗೆದುಕೊಂಡು ಬನ್ನಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಬಡವರ ಹಾಗೂ ದೀನ ದಲ್ಲಿತರ ಪರ, ಅಲ್ಪಸಂಖ್ಯಾತ ಪರ ಯೋಚನೆ ಮಾಡುವಂತ ಮುಖ್ಯಮಂತ್ರಿ. ನಮ್ಮ ಸರ್ಕಾರ ಉಚಿತ ವಿದ್ಯುತ್, ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, ಮಹಿಳೆಯರಿಗೆ 2000 ರು. ಉಚಿತ ಬಸ್ ಪ್ರಯಾಣ ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.
ಡಾಕ್ಟರ್ ಮಗ ಡಾಕ್ಟರ್, ಇಂಜಿನಿಯರ್ ಮಗ ಇಂಜಿನಿಯರ್ ಆಗಬೇಕೆಂಬ ಕಾಲ ಬದಲಾಗಿದೆ. ಯಾರ ಮಕ್ಕಳು ಏನು ಬೇಕಾದರೂ ಆಗಬಹುದು.
ನಿಮ್ಮ ಬದುಕಿನಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯದು ಆಗಬೇಕಾದರೆ, ನಿಮ್ಮ ಮಕ್ಕಳಿಗೆ ಸಮ ಸಮ ಸಮಾಜ ನಿರ್ಮಾಣ ಆಗಬೇಕಾದರೆ, ಶೋಷಿತರು, ಸಾಮಾಜಿಕ ಮುನ್ನಲೆಗೆ ಬರಬೇಕಾದರೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ಆ ಕೆಲಸದ ಬಗ್ಗೆ ನೀವು ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಕಾರ್ಮಿಕರ ಕಠಿಣ ಪರಿಶ್ರಮ, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಗುರುತಿಸುವ ಮಹತ್ವದ ಜವಾಬ್ದಾರಿ ಸರ್ಕಾರದ್ದಾಗಬೇಕು. ಅವರಿಗೆ ನ್ಯಾಯಯುತವಾಗಿ ವೇತನವನ್ನು ಕೊಡುವಂತಹ, ಅವರು ಮಾಡುವಂತಹ ಕೆಲಸಕ್ಕೆ ಸಮಯವನ್ನು ನಿಗದಿಪಡಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ, ಇಂತಹ ಕಾರ್ಯಕ್ರಮಗಳ ಮೂಲಕ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಮಾಲಿ ಸಂಘದ ಅಧ್ಯಕ್ಷ ರಹಿಂ, ಕಾರ್ಯದರ್ಶಿ ಮಂಜುನಾಥ್, ನಗರಸಭಾ ಮಾಜಿ ಸದಸ್ಯರಾದ ಮಧು ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ ನಡೆದ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು, ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಮಿಕರೊಂದಿಗೆ ಬೈಕ್ ಚಾಲನೆ ಮಾಡಿದರು.



