ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‍ಜಿಯುಎಚ್‍ಎಸ್) 28ನೇ ಘಟಿಕೋತ್ಸವದಲ್ಲಿ ಆಯುರ್ವೇದ ವೈದ್ಯಕೀಯ ಕ್ಷೇತ್ರದ ಕಾಯಚಿಕಿತ್ಸಾ ಸ್ನಾತಕೋತ್ತರ (ಎಂ.ಡಿ.) ವಿಭಾಗದಲ್ಲಿ ಡಾ. ಪೂಜಾ ಬಿ.ಜಿ.ಕೊಟ್ಟಿಗೆಹಾರ ಅವರು ಚಿನ್ನದ ಪದಕ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಬೆಂಗಳೂರಿನ ಜಿ.ಕೆ.ವಿ.ಕೆ. ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಾ. ಪೂಜಾ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಕೊಟ್ಟಿಗೆಹಾರ ತರುವೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸುಶೀಲ ಮತ್ತು ಗೋಪಾಲ್ ಬಿನ್ನಡಿ ದಂಪತಿಯ ಪುತ್ರಿಯಾಗಿರುವ ಡಾ. ಪೂಜಾ, ಆಯುರ್ವೇದ ವೈದ್ಯಕೀಯ ಕ್ಷೇತ್ರದ ಕಾಯಚಿಕಿತ್ಸಾ ಸ್ನಾತಕೋತ್ತರ (ಎಂ.ಡಿ. ಕಾಯಚಿಕಿತ್ಸಾ) ವಿಭಾಗದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ತೋರಿದ ಹಿನ್ನೆಲೆಯಲ್ಲಿ ಈ ಗೌರವಕ್ಕೆ ಭಾಜನರಾಗಿದ್ದಾರೆ.
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಡಾ. ಪೂಜಾ ಅವರ ಈ ಸಾಧನೆ ಯುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಕುಟುಂಬದೊಂದಿಗೆ ಗ್ರಾಮಕ್ಕೂ ಕೀರ್ತಿ ತಂದಿದೆ. ಅವರ ಸಾಧನೆಗೆ ಪೋಷಕರು, ಬಂಧು-ಬಳಗ, ಸ್ನೇಹಿತರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.



