ಶರೀರಿದ ಬೆನ್ನುಮೂಳೆ ಹಾಗೂ ಮೂಳೆ ಆಘಾತಗಳಿಗೆ ಚಿಕಿತ್ಸೆ ಒದಗಿಸಲು ಆಶ್ರಯದಲ್ಲಿ ಹೊಸದಾಗಿ ಪೂರ್ಣ ಪ್ರಮಾಣದ ಚಿಕಿತ್ಸಾ ಕೇಂದ್ರ ಹಾಗೂ ತಜ್ಞ ವೈದ್ಯರನ್ನು ನೇಮಿಸುವ ಮೂಲಕ ಸಾರ್ವಜನಿಕರ ಸೇವೆಗೆ ದೊಡ್ಡಹೆಜ್ಜೆಯಿಟ್ಟಿದೆ ಎಂದು ಚಿಕ್ಕಮಗಳೂರು ಆಶ್ರಯ ಆಸ್ಪತ್ರೆ ನಿರ್ದೇಶಕ ಡಾ|| ವಿ.ಅನಿಕೇತ್ ವಿಜಯ್ ಹೇಳಿದರು.
ಅವರು ನಗರದ ಆಶ್ರಯ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಮೂಳೆ ಚಿಕಿತ್ಸೆ ಆಘಾತ ಮತ್ತು ಬೆನ್ನುಮೂಳೆ ವಿಭಾಗಕ್ಕೆ ಹೊಸದಾಗಿ ಡಾ.ಟಿ.ಜಗದೀಶ್ ಅವರನ್ನು ವೈದ್ಯರಾಗಿ ನೇಮಕಾತಿ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಳೆಗಳು, ಕೀಲುಗಳು ಮತ್ತು ಬೆನ್ನುಮೂಳೆಗೆ ಸುಧಾರಿತ ಆರೈಕೆಗಾಗಿ ಆಶ್ರಯ ಆಸ್ಪತ್ರೆ ಸಜ್ಜಾಗಿದೆ. ಬಿರುಕು ಮತ್ತು ಅಪಘಾತ ನಿರ್ವಹಣೆ, ಬೆನ್ನುಮೂಳೆಯ ಅಸ್ವಸ್ಥತೆಗಳು, ಶಸ್ತ್ರ ಚಿಕಿತ್ಸೆಗಳು ಕೀಲು ಮತ್ತು ಮೂಳೆ ಚಿಕಿತ್ಸೆ, ಸುಧಾರಿತ ಮೂಳೆ ಚಿಕಿತ್ಸೆ ಒದಗಿಸಲು 24 ಗಂಟೆಗಳ ಕಾಲ ಸೇವೆಗೆ ಸಿದ್ದವಾಗಿದ್ದು ಪ್ರತಿಯೊಂದು ಮೂಳೆ ಮತ್ತು ಕೀಲು ಸಮಸ್ಯೆಗೆ ಆರೈಕೆ ಮಾಡಲಾಗುವುದು ಎಂದರು.
ಕಳೆದ ಹಲವು ವರ್ಷಗಳಿಂದ ಮೂಳೆ ಚಿಕಿತ್ಸಾ ಕೇಂದ್ರ ತೆರೆಯುವ ಉದ್ದೇಶ ಹೊಂದಲಾಗಿತ್ತು. ವಿಶೇಷವಾಗಿ ಸ್ಥಳೀಯ ವೈದ್ಯರ ಅವಶ್ಯದ ಹಿನ್ನೆಲೆಯಿತ್ತು. ಡಾ.ಜಗದೀಶ್ ಅವರು ಅನೇಕ ಕಡೆಗಳಲ್ಲಿ ಮೂಳೆ ಚಿಕಿತ್ಸೆ ಕೇಂದ್ರಗಳಲ್ಲಿ ನಿಭಾಯಿಸಿರುವ ಸಾಮರ್ಥ್ಯ ಹಾಗೂ ಜಿಲ್ಲೆಯವರಾದ ಕಾರಣ ಆಶ್ರಯ ಕುಟುಂಬದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಇತ್ತೀಚಿನ ದಿನಮಾನದಲ್ಲಿ ಮೂಳೆ ಸಂಬಂಧಿಸಿದ ಸಮಸ್ಯೆಗಳು ಜನರಲ್ಲಿ ಹೆಚ್ಚಳಗೊಳ್ಳುತ್ತಿವೆ. ತಜ್ಞ ವೈ ದ್ಯರು ಹಾಗೂ ಅವಶ್ಯಕತೆಗನುಸಾರ ಉಪಕರಣದ ಸಮಸ್ಯೆಯಿತ್ತು. ಇದೀಗ ಆಶ್ರಯ ಆಸ್ಪತ್ರೆ ಪ್ರಥಮ ಬಾರಿಗೆ ಮೂಳೆ ಚಿಕಿತ್ಸೆಗೆ ಅನುಕೂಲವಾಗಲು ಉಪಕರಣ, ವೈದ್ಯರನ್ನು ನೇಮಿಸಿ ರೋಗಿಗಳ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದೆ ಎಂದು ಹೇಳಿದರು.
ಮೂಳೆ ಚಿಕಿತ್ಸಾ ತಜ್ಞ ಡಾ|| ಟಿ.ಜಗದೀಶ್ ಮಾತನಾಡಿ ವಯಸ್ಕರು ಮತ್ತು ಮಕ್ಕಳಲ್ಲಿ ವಿರೂಪತೆಯ ಸೊಂಕುಗಳು, ಕ್ಷೀಣಗೊಳ್ಳುವ ಬೆನ್ನುಮೂಳೆಯ ಅಸ್ವಸ್ಥತೆಗಳು, ಬೆನ್ನು ನೋವು, ಮೂಳೆ ಮುರಿತ ನಿರ್ವ ಹಣೆ, ಜಂಟಿ ಬದಲಿ, ಕ್ರೀಡೆ ಮತ್ತು ಅಸ್ಥಿರಜ್ಜು ಗಾಯ, ಪೀಡಿಯಾಟ್ರಿಕ್ ಅರ್ಥೋಪೆಡಿಕ್ಸ್, ನಾನ್ ಆಪರೇಟಿ ವ್ ನೋವು ನಿರ್ವಹಣೆಗೆ ಚಿಕಿತ್ಸೆ ಮೂಲಕ ಪರಿಹಾರ ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಆಶ್ರಯ ಆಸ್ಪತ್ರೆ ಸಂಸ್ಥಾಪಕ ಡಾ|| ಡಿ.ಎಲ್.ವಿಜಯ್‍ಕುಮಾರ್, ಡಾ|| ಅವಿನಾಶ್, ಆಸ್ಪತ್ರೆಯ ವ್ಯವಸ್ಥಾಪಕ ಪುರುಷೋತ್ತಮ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



