ಸಾರ್ವಜನಿಕರ ಕೆಲಸ ಮಾಡುವಾಗ ಅವರಿಂದ ಲಂಚ ಪಡೆಯುವುದು ಹಾಗೂ ಕರ್ತವ್ಯ ಲೋಪ ಎಸಗುವ ಬಗ್ಗೆ ಯಾವುದೇ ದೂರು ಬಾರದಂತೆ ಪಾರದರ್ಶವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಲೋಕಾಯುಕ್ತ ಡಿವೈಎಸ್‍ಪಿ ತಿರುಮಲೇಶ್ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ವತಿಯಿಂದ ಏರ್ಪಡಿಸಿದ್ದ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಂದ ಇಲಾಖೆವಾರು ಪ್ರಗತಿ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡಿದರು.
ಸರಕಾರಿ ನೌಕರರು ಬೇಜವಾಬ್ದಾರಿಯಿಂದ ಕೆಲಸ ಮಾಡುವುದು, ಲಂಚಕ್ಕಾಗಿ ಬೇಡಿಕೆ ಇರುವುದು ದೂರು ಬಂದರೆ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು. ಈಗಾಗಲೇ ಲಂಚಕ್ಕಾಗಿ ಬೇಡಿಕೆ ಇಟ್ಟು ಸಿಕ್ಕಿಹಾಕಿಕೊಂಡ ಅನೇಕ ಅಧಿಕಾರಿಗಳು ಹಾಗೂ ನೌಕರರು ತಮ್ಮ ಕುಟುಂಬ ನಿರ್ವಹಿಸಲು ಸಾಧ್ಯವಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ಸ್ಥಿತಿ ಬರಬಾರದೆಂದರೆ ಸರಕಾರಿ ನೌಕರರು ಭ್ರಷ್ಟಾಚಾರದಲ್ಲಿ ಮುಳುಗಬಾರದೆಂದು ಹೇಳಿದರು.
ಎಲ್ಲಾ ಇಲಾಖೆಯಲ್ಲಿ ಎಷ್ಟು ಮಂದಿ ಅಧಿಕಾರಿ ಹಾಗೂ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ? ಅವರ ಜವಾಬ್ದಾರಿ ಬಗ್ಗೆ ನೋಟೀಸು ಬೋರ್ಡ್‍ನಲ್ಲಿ ಹಾಕಬೇಕು. ಲೋಕಾಯುಕ್ತ ಸಂಸ್ಥೆಯ ಬೋರ್ಡ್ ಹಾಕಬೇಕು. ಮಧ್ಯವರ್ತಿಗಳ ಹಾವಳಿ ಇದ್ದರೆ ಸಿಸಿ ಕ್ಯಾಮರ ಅಳವಡಿಸಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಬೇಕು. ಎಲ್ಲಾ ಇಲಾಖೆಯ ನಗದು ಘೋಷಣೆ ರಿಜಿಸ್ಟರ್‍ನಲ್ಲಿ ನಮೂದಿಸಬೇಕು. ಸಾರ್ವಜನಿಕರಿಂದ ಯಾವುದೇ ಸಮಸ್ಯೆ ಬಗ್ಗೆ ದೂರು ಬಂದರೆ ಕೂಡಲೇ ಬಗೆಹರಿಸಲು ಕ್ರಮ ವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಸಾರ್ವಜನಿಕರು ಶಾಲೆ ಕಟ್ಟಡ, ಎನ್‍ಆರ್‍ಐಜಿ ಕಾಮಗಾರಿ, ಅಕ್ರಮ ಭೂ ಮಂಜೂರು ಸೇರಿದಂತೆ ವಿವಿಧ ವಿಷಯದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು.
ತಹಸೀಲ್ದಾರ್ ರಾಜಶೇಖರ್ ಮೂರ್ತಿ, ತಾ.ಪಂ. ಇಒ ದಯಾವತಿ, ಲೋಕಾಯುಕ್ತ ಅಧಿಕಾರಿಗಳಾದ ಶ್ರೀಧರ್, ಲೋಕೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



