ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ, ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ನಲವತ್ತಕ್ಕೂ ಹೆಚ್ಚು ಕಾಡಾನೆಗಳ ಗುಂಪು ಸಂಚರಿಸುತ್ತಿದ್ದು, ಈ ಭಾಗದ ಜನರು ಕಂಗಾಲಾಗಿದ್ದಾರೆ.
ಬೇಲೂರು, ಸಕಲೇಶಪುರ, ಅರೆಹಳ್ಳಿ ಭಾಗದಲ್ಲಿ ಇದ್ದ ಕಾಡಾನೆಗಳು ಈಗ ಹಾಸನ ಗಡಿದಾಟಿ ಚಿಕ್ಕಮಗಳೂರು ಜಿಲ್ಲೆಗೆ ಎಂಟ್ರಿಕೊಟ್ಟಿದ್ದು, ಭೀಮಾ, ಭುವನೇಶ್ವರಿ ಗುಂಪಿನ ಸುಮಾರು 40 ರಿಂದ 45 ಕಾಡಾನೆಗಳು ಮಾಕೋನಹಳ್ಳಿ, ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸುತ್ತುಹೊಡೆಯುತ್ತಿವೆ. ಈ ಅನೆಗಳು ನಾಲ್ಕರಿಂದ ಐದು ಗುಂಪುಗಳಾಗಿ ಹಂಚಿ ಹೋಗಿದ್ದು, ಅರಣ್ಯ ಇಲಾಖೆಗೂ ತಲೆನೋವು ತಂದಿದೆ.
ಮಾಕೋನಹಳ್ಳಿ, ಮೂಡಸಸಿ, ತುದಿಯಾಲ, ನಂದೀಪುರ, ಕಾರಬೈಲ್, ಪುರ, ಹೊರಟ್ಟಿ, ಬಾರದಹಳ್ಳಿ, ಚಟ್ನಳ್ಳಿ, ಬೊಮ್ಮೇನಹಳ್ಳಿ, ಸಂಗಮಾಪುರ, ಗಬ್ಬಳ್ಳಿ ಮುಂತಾದ ಗ್ರಾಮಗಳಲ್ಲಿ ಒಂದು ವಾರದಿಂದ ಕಾಡಾನೆಗಳು ಅತ್ತಿಂದಿತ್ತ, ಇತ್ತೀಂದತ್ತ ಸಂಚರಿಸುತ್ತಿದ್ದು, ಕಾಫಿ ತೋಟಗಳನ್ನು ಸಂಪೂರ್ಣ ನಾಶಪಡಿಸುತ್ತಿವೆ. ಕೆಲವು ಸಣ್ಣ ರೈತರ ಸಂಪೂರ್ಣ ತೋಟಗಳೇ ನಾಶವಾಗಿದ್ದರೆ ದೊಡ್ಡ ದೊಡ್ಡ ಎಸ್ಟೇಟ್ ಗಳಲ್ಲಿಯೂ ಕಾಡಾನೆಗಳು ನುಗ್ಗಿ ತೀವ್ರ ಹಾನಿ ಉಂಟುಮಾಡುತ್ತಿವೆ.

ಕಾಡಾನೆ ಗುಂಪಿನಿಂದಾಗಿ ಈ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಯಿಂದ ಹೊರಬರಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದಲ್ಲ ಎರಡಲ್ಲ, ಮೂವತ್ತಕ್ಕೂ ಹೆಚ್ಚು ಕಾಡಾನೆಗಳು ಈ ಗುಂಪಿನಲ್ಲಿ ಇವೆ ಎಂದು ತಿಳಿದುಬಂದಿದೆ. ಆನೆಗಳ ಗುಂಪಿನಲ್ಲಿ ಮರಿಗಳು ಇರುವುದರಿಂದ ಮರಿಗಳ ರಕ್ಷಣೆಗೆ ಕಾಡಾನೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಈ ಭಾಗದಲ್ಲಿ ಕಾರ್ಮಿಕರು ತೋಟದ ಕೆಲಸಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಇದರಿಂದ ಕೆಲಸ ಕಾರ್ಯಗಳು ಸ್ಥಗಿತವಾಗಿವೆ. ಜನರು ವಾಹನಗಳಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ.
ಮಾಕೋನಹಳ್ಳಿ ಹೊರಟ್ಟಿ ಗ್ರಾಮದ ಮಂಜುನಾಥ ಎನ್ನುವ ಸಣ್ಣ ರೈತರ ಜಮೀನಿಗೆ ಶನಿವಾರ ರಾತ್ರಿ ಕಾಡಾನೆಗಳ ಗುಂಪು ದಾಳಿ ಮಾಡಿದ ಪರಿಣಾಮ ಜಮೀನಿನಲ್ಲಿ ಬೆಳೆದಂತಹ ಲಕ್ಷಾಂತರ ಮೌಲ್ಯದ ಕಾಫಿ, ಅಡಿಕೆ, ಕಾಳುಮೆಣಸು, ಬಾಳೆ ಗಿಡಗಳು ನಾಶವಾಗಿವೆ. ಫಸಲಿಗೆ ಬಂದಂತಹ ಸುಮಾರು ಅಡಿಕೆ ಮರಗಳನ್ನು ಕೆಡವಿ ಹಾಕಿವೆ. ತೋಟದಲ್ಲಿ ನೀರಾವರಿಗೆ ಅಳವಡಿಸಿದ್ದ ಪೈಪುಗಳನ್ನು ನಾಶಪಡಿಸಿವೆ. ಇಂತಹ ಅನೇಕ ಮಂದಿ ರೈತರಿಗೆ ಈ ಭಾಗದಲ್ಲಿ ತೀವ್ರ ನಷ್ಟವುಂಟಾಗಿದೆ.
ಈ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪತ್ರಿಕಾ ಗೋಷ್ಠಿ ನಡೆಸಿ ಮೂಡಿಗೆರೆ ಬಂದ್ ಗೆ ಕರೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಸಹ ಸರ್ಕಾರದ ವಿರುದ್ಧ ಅಸಮದಾನ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.



