ಕಾಡಾನೆಗಳಿಂದ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಮಾಕೋನಹಳ್ಳಿ ಹಾಗೂ ನಂದೀಪುರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಶನಿವಾರ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ ಮಾತನಾಡಿ, ಈ ಹಿಂದೆ ಕಾಡಾನೆಗಳು ಬಂದು ಹೋಗುತ್ತಿದ್ದವು. ಆದರೆ ಈಗ ಇಲ್ಲಿಯೇ ನೆಲೆಸಿಬಿಟ್ಟಿವೆ. ತೋಟದಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶಪಡಿಸುತ್ತಿವೆ. ನಮಗೆ ಬೆಳೆ ಪರಿಹಾರಕ್ಕಿಂತ ಜೀವ ಉಳಿಸಿಕೊಂಡರೆ ಸಾಕೆಂಬ ಸ್ಥಿತಿಗೆ ಬಂದಿದ್ದೇವೆ. ಯಾವ ಸಮಯದಲ್ಲಾದರು ಪ್ರಾಣ ಹಾನಿಯಾಗುವ ಸಂಭವವಿದೆ. ಆದರೂ ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಉಪಸಭಾಪತಿಗಳು ತಲೆಕೆಡಿಸಿಕೊಂಡಿಲ್ಲ. ಇನ್ನು ಅರಣ್ಯ ಸಚಿವರು ಕಳೆದೇ ಹೋಗಿದ್ದಾರೆ. ನಮ್ಮ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಕಾಡು ಪ್ರಾಣಿಗಳಿಂದ ರಕ್ಷಣೆ ಕೊಡದ ಅರಣ್ಯ ಇಲಾಖೆ ನಮಗೆ ಅಗತ್ಯವಿಲ್ಲ. ಇನ್ನು 2 ದಿನದಲ್ಲಿ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಇಲ್ಲವಾದರೆ ಅರಣ್ಯ ಇಲಾಖೆಗೆ ಗೆರಾವ್ ಹಾಕಲಾಗುವುದು. ನಂತರ ಶಾಸಕರ ಮನೆ ಮುಂದೆ ಅನಿರ್ಧಿಷ್ಟಾವದಿ ದರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಎಸ್.ಪಿ.ರಾಜು ಮಾತನಾಡಿ, ಮಾಕೋನಹಳ್ಳಿ ಹಾಗೂ ನಂದೀಪುರ ಗ್ರಾ.ಪಂ. ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಭುವನೇಶ್ವರಿ ಮತ್ತು ಕೆಪಿ ಕಾಲರ್ ತಂಡದ ಸುಮಾರು 42ಕ್ಕೂ ಅಧಿಕ ಕಾಡಾನೆಗಳು ಕಳೆದ 15 ದಿನದಿಂದ ಇಲ್ಲಿಯೇ ಬೀಡು ಬಿಟ್ಟಿವೆ. ಅವುಗಳು ಕಾಫಿ ತೋಟ ಹಾಳು ಮಾಡುವ ಜತೆಗೆ ಮನೆಗಳ ಸಮೀಪ ಬರುತ್ತಿವೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗದ ಸ್ಥಿತಿ ಉಂಟಾಗಿದೆ. ತೋಟದಲ್ಲಾಗಿರುವ ಹಾನಿ ವೀಕ್ಷಿಸಲು ರೈತರು ತೋಟಕ್ಕೆ ಹೋಗಲು ಭಯಪಡುವಂತಾಗಿದೆ. ಅಲ್ಲದೇ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಕುಟುಂಬ ನಿರ್ವಹಣೆಗೆ ಕಷ್ಟಪಡಬೇಕಾಗಿದೆ. ರಾತ್ರಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿಲ್ಲ. ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಕಾಡಾನೆಗಳನ್ನು ಕೂಡಲೇ ಸ್ಥಳಾಂತರಿಸುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉತ್ತರಿಸಬೇಕೆಂದು ಒತ್ತಾಯಿಸಿದರು.
ನಂತರ ಎಸಿಎಫ್ ಮೋಹನ್ ಹಾಗೂ ಆರ್‍ಎಫ್‍ಒ ಕಾವ್ಯ ಸ್ಥಳಕ್ಕೆ ಆಗಮಿಸಿ, ಈಗಾಗಲೇ 15 ಕಾಡಾನೆಗಳು ಕಾಡಿಗೆ ವಾಪಾಸು ತೆರಳಿವೆ. ಭುವನೇಶ್ವರಿ ಹಾಗೂ ಕೆ.ಪಿ.ಕಾಲರ್ ತಂಡದ ಸುಮಾರು 20 ಕಾಡಾನೆಗಳು ಕೆಲ್ಲೂರು ಮತ್ತು ಬಾರದಹಳ್ಳಿ ಗ್ರಾಮದಲ್ಲಿವೆ. ಅವುಗಳನ್ನು ಏಕ ರೀತಿಯಲ್ಲಿ ಓಡಿಸಿದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಅವುಗಳ ಸ್ವಾಭಾವಿಕ ಸಂಚಾರಕ್ಕೆ ಅನುವು ಮಾಡಿ, ಹತ್ತಿರದ ಕಾಡಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಮಾಕೋನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಂಜುಳ, ಸದಸ್ಯ ಪುಟ್ಟರಾಜು, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಬ್ರಿಜೇಶ್ ಕಡಿದಾಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



