ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಹಾಗೂ ಮೃತರಾದ ಅಮಾಯಕರಿಗೆ ಸಂತಾಪ ಸೂಚಿಸಿ SDPI ಬಿಳಗುಳ ಘಟಕ ಸಮಿತಿ ವತಿಯಿಂದ ಬಿಳಗುಳದಲ್ಲಿ ಕ್ಯಾಂಡಲ್ ಲೈಟ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಕ್ಷೇತ್ರ ಸಮಿತಿ ಕೋಶಾಧಿಕಾರಿ ಆದಂ ಬಾಪುನಗರ ರವರು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸುತ್ತಾ, ಈ ಹಿಂದೆ ಪುಲ್ವಾಮದಲ್ಲಿ ನಡೆದಂತಹ ದಾಳಿಯಿಂದ ಎಚ್ಚೆತ್ತು ಕೊಳ್ಳದ ಕೇಂದ್ರ ಸರ್ಕಾರವು, ದೇಶದ ಗಡಿಗಳನ್ನು ಭದ್ರ ಪಡಿಸದೆ ಇರುವುದೇ ಈ ಘಟನೆಗೆ ಕಾರಣ, ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಈ ಘಟನೆಯಿಂದ ಮತ್ತೊಮ್ಮೆ ಸಾಬಿತಾಗಿದ್ದು, ಈ ದಾಳಿಯ ಹೊಣೆಯನ್ನು ಹೊತ್ತು ಈ ಕೂಡಲೇ ಗೃಹಮಂತ್ರಿ ಅಮಿತ್ ಷಾ ರಾಜಿನಾಮೆ ನೀಡಬೇಕು ಹಾಗೂ ಘಟನೆಯಲ್ಲಿ ಹುತಾತ್ಮರಾದ ಸಹೋದರರ ಕುಟುಂಬಕ್ಕೆ ಸರ್ಕಾರದ ವತಿಯಿಂದ 50 ಲಕ್ಷ ಪರಿಹಾರ ನೀಡುವುದರ ಜೊತೆಗೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಹೇಳಿದರು.
ಘಟಕ ಸಮಿತಿ ಅಧ್ಯಕ್ಷರಾದ ಅಲ್ತಾಫ್ ಬಿಳಗುಳರವರು ಮಾತನಾಡಿ ದೇಶವಿರೋಧಿ ಚಟುವಟಿಕೆ ಮಾಡುವವರನ್ನು ದೇಶದ ಜನತೆ ಸಹಿಸುವುದಿಲ್ಲ. ಅಮಾಯಕರ ರಕ್ತಪಾತ ಮಾಡುವ ಭಯೋತ್ಪಾದಕರ ವಿರುದ್ಧ ನಾವೆಲ್ಲರೂ ಒಂದಾಗಬೇಕು, ದೇಶದ ಶಾಂತಿಯನ್ನು ಕದಡುವ, ಕಿಡಿಗೇಡಿತನ ಮತ್ತು ಅಶಾಂತಿ ಹರಡುವವರ ವಿರುದ್ಧ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ, ಧರ್ಮ, ಜಾತಿ, ಭಾಷೆ ಎನ್ನುವ ಎಲ್ಲಾ ಭೇದಗಳನ್ನು ಮರೆತು ದೇಶದ ಏಕತೆ, ಮತ್ತು ಸಹೋದರತೆಯನ್ನು ಕಾಪಾಡಬೇಕು. ಹಿಂಸೆಯನ್ನು ಪ್ರಚೋದಿಸುವ ಮತ್ತು ದೇಶದ ವಿರುದ್ಧ ವಿಷ ಹರಡುವವರ ವಿರುದ್ಧ ದೇಶದ ಪ್ರತಿಯೊಬ್ಬರು ಏಕಮತದಿಂದ ನಿಲ್ಲಬೇಕು , ಅದೇ ರೀತಿಯಲ್ಲಿ ಗಡಿಯಲ್ಲಿ ಭದ್ರತೆಯನ್ನು ನಿಯೋಜಿಸಲು ವಿಫಲವಾದ ಕೇಂದ್ರದ ಸಮ್ಮಿಶ್ರ ಸರ್ಕಾರದಿಂದ ಆಯ್ಕೆಯಾಗಿರುವ ಪ್ರಧಾನಿಯವರು ಕಾಶ್ಮೀರಕ್ಕೆ ಭೇಟಿ ನೀಡದೇ ಚುನಾವಣೆ ನಡೆಯುತ್ತಿರುವ ಬಿಹಾರದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಸೈಫ್ , ಸದಸ್ಯರಾದ ತೌಸೀಫ್, ಸಾದಾತ್, ಅಜೀಂ, ಸಾದ್, ರಾಹೀಲ್ , ಸಾಹೀಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.



