ಸರಕಾರದ ಕಂದಾಯ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಸೋಮವಾರ ಮೂಡಿಗೆರೆ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು.
ಆರಂಭದಲ್ಲಿ ಸರ್ವೆ, ಭೂಮಿ, ನೊಂದಣೆ ಸೇರಿದಂತೆ ವಿವಿಧ ವಿಭಾಗದ ಕಛೇರಿಗಳಿಗೆ ತೆರಳಿ ಪರಿಶೀಲಿಸಿದರು. ಎಲ್ಲಾ ಕಡತಗಳನ್ನು ಜೋಪಾನ ಮಾಡಬೇಕು. ಹಳೆ ಕಡತಗಳನ್ನು ಸ್ಕಾನ್ ಮಾಡಿಟ್ಟುಕೊಂಡು ನಂತರ ನಾಶಪಡಿಸಬೇಕು. ಕೊಠಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಕಟ್ಟಡ ದುರಸ್ತಿ ಕಾಮಗಾರಿ ವೀಕ್ಷಿಸಿ, ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕೆಂದು ತಹಸೀಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ರಾಜ್ಯಾಧ್ಯಂತ ಪೋಡಿ ಮುಕ್ತ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಈಗಾಗಲೇ ಸಾಕಷ್ಟು ಪ್ರಗತಿ ಕಂಡಿದೆ. ರಾಜ್ಯದಲ್ಲಿ ಪಟ್ಟಣ ವ್ಯಾಪ್ತಿ 3, ನಗರದಲ್ಲಿ 10, ಮಹಾನನಗರದಲ್ಲಿ 18 ಕಿ,ಮೀ ವ್ಯಾಪ್ತಿಯಲ್ಲಿ ನಿಯಮಬಾಹೀರವಾಗಿ ಮಂಜೂರಾಗಿರುವ ಭೂಮಿಗೆ ಪೋಡಿ ಮಾಡಬಾರದೆಂಬ ನಿಯಮವಿದೆ. ಹಿಂದೆ ಪೋಡ್‍ಗಾಗಿ ಅರ್ಜಿ ನೀಡಿದವರ ದಾಖಲೆಗಳು ನೈಜವಾಗಿದ್ದರೆ ಅಂತಹ ಅರ್ಜಿಗಳನ್ನು ವಿಲೇ ಮಾಡಬಹುದಾಗಿದೆ ಎಂದು ಹೇಳಿದರು.

ಆಟದ ಮೈದಾನ, ಅಂಗನವಾಡಿ, ನಿವೇಶನ ಸೇರಿದಂತೆ ಜನರಿಗೆ ಅನುಕೂಲವಾಗುವಂತಹ ಕಾರ್ಯ ನಡೆಸಲು ಭೂಮಿ ಇಲ್ಲದಂತಾಗಿದೆ. ಸರ್ಕಾರಿ ಭೂಮಿ ಬಹಳಷ್ಟು ಒತ್ತುವರಿಯಾಗಿದೆ. ಮೂಡಿಗೆರೆ ಮತ್ತು ಕಡೂರು ತಾಲ್ಲೂಕುಗಳಲ್ಲಿ ಅಕ್ರಮ ಭೂ ಮಂಜೂರಾತಿ ವ್ಯಾಪಕವಾಗಿ ನಡೆದಿದೆ. ಹಾಗಾಗಿ ಕಳೆದ ಒಂದೂವರೆ ವರ್ಷದ ಹಿಂದೆ ಸರಕಾರದಿಂದ ತನಿಖಾ ತಂಡ ಆಗಮಿಸಿ, ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಫಾರಂ ನಂ 50 ಹಾಗೂ 53ಯಲ್ಲಿ ಸಾವಿರಾರು ಮಂದಿಗೆ ಅಕ್ರಮವಾಗಿ ಭೂ ಮಂಜೂರಾತಿಯಾಗಿರುವುದನ್ನು ಪತ್ತೆ ಮಾಡಿದ್ದಾರೆ. ಅದರ ಆಧಾರದ ಮೇಲೆ ಅಕ್ರಮ ಭೂ ಮಂಜೂರಾತಿ ಅರ್ಜಿ ವಜಾ ಮಾಡಲಾಗುತ್ತಿದೆ. ನೈಜ ಫಲಾನುಭವಿಗಳಿಗೆ ತೊಂದರೆ ಆಗಿದ್ದರೆ, ಅಂತವರು ಪುನಃ ಅರ್ಜಿ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಒತ್ತುವರಿ ಭೂಮಿ ಗುತ್ತಿಗೆ ಪ್ರಕ್ರಿಯೆ ವಿಳಂಬವಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಕಟಾರಿಯಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಉಪವಿಭಾಗಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಮೂಡಿಗೆರೆ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



