ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಅಬ್ದುಲ್ ಸಫ್ವಾನ್ (29), ನಿಯಾಜ್ (28), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ರಂಜಿತ್ (19), ನಾಗರಾಜ್ (20), ಮೊಹಮ್ಮದ್ ರಿಜ್ವಾನ್ (28) ಮತ್ತು ಆದಿಲ್ ಮೆಹರೂಫ್ ಬಂಧಿತ ಆರೋಪಿಗಳು. ಇವರಲ್ಲಿ ರಂಜಿತ್ ಮತ್ತು ನಾಗರಾಜ್ ಚಿಕ್ಕಮಗಳೂರು ಜಿಲ್ಲೆ ಕಳಸ ಮೂಲದವರು ಎಂದು ತಿಳಿದುಬಂದಿದೆ.
ಮಂಗಳೂರಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್, ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು, ನಾವು ಎರಡೂ ಜಿಲ್ಲೆಗಳಲ್ಲಿ ಕೋಮು ವಿರೋಧಿ ಕಾರ್ಯಪಡೆಯನ್ನು ರಚಿಸುತ್ತಿದ್ದೇವೆ. ಈ ಕಾರ್ಯಪಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ. ಕೋಮುವಾದವನ್ನು ಬೆಂಬಲಿಸುವ ಅಥವಾ ಉತ್ತೇಜಿಸುವವರ ವಿರುದ್ಧ ಕೋಮು ವಿರೋಧಿ ಕಾರ್ಯಪಡೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಬಲೆಗೆ 8 ಮಂದಿ ಶಂಕಿತ ಆರೋಪಿಗಳು ಬಿದ್ದಿದ್ದಾರೆ.
ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ. ಗುಂಪು ಹಲ್ಲೆ ಮತ್ತು ಸುಹಾಸ್ ಹತ್ಯೆ ಪ್ರಕರಣ ಎರಡೂ ಘಟನೆಗಳು ಕೋಮು ಸಾಮರಸ್ಯಕ್ಕೆ ಸವಾಲೊಡ್ಡುತ್ತವೆ. ನಾವು ಯಾವುದೇ ರೀತಿಯ ಕೋಮು ಶಕ್ತಿಗಳನ್ನು ಸಹಿಸುವುದಿಲ್ಲ. ನಮ್ಮ ಸರ್ಕಾರ ಈ ಪ್ರದೇಶದಲ್ಲಿ ಶಾಂತಿ ಕಾಪಾಡಲು ಬದ್ಧವಾಗಿದೆ. ಈ ಘಟನೆಗಳ ಬಗ್ಗೆ ನಾವು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದೇವೆ. ನಕ್ಸಲ್ ವಿರೋಧಿ ಪಡೆಯಂತೆಯೇ ನಾವು ಕೋಮು ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸುತ್ತೇವೆ. ಇದು ಕೋಮು ಚಟುವಟಿಕೆಗಳನ್ನು ಮತ್ತು ಅವುಗಳನ್ನು ಬೆಂಬಲಿಸುವವರನ್ನು ಎದುರಿಸಲು ಸಮಗ್ರ ಅಧಿಕಾರವನ್ನು ಹೊಂದಿರುವ ಪ್ರತ್ಯೇಕ ವಿಭಾಗವಾಗಿರುತ್ತದೆ. ಪ್ರಚೋದನಕಾರಿ ಭಾಷಣಗಳು ಅಥವಾ ಹೇಳಿಕೆಗಳನ್ನು ನೀಡುವ ಯಾರಾದರೂ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.
ಕೊಲೆ ಸಂಚಿನಲ್ಲಿ ಫಾಜಿಲ್ ಸಹೋದರನು ಭಾಗಿ
ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ತಮ್ಮ ಆದಿಲ್ ಸುಹಾಸ್ ಕೊಲೆಗೆ ಸಂಚು ಹೂಡಿದ್ದು, 5 ಲಕ್ಷ ಫಂಡಿಂಗ್ ಮಾಡಿದ್ದಾಗಿಯೂ ಪೊಲೀಸ್ ಆಯುಕ್ತ ಅನುಪಮ್ ಆಗರ್ವಾಲ್ ತಿಳಿಸಿದ್ದಾರೆ. ಫಾಜಿಲ್ ಕೊಲೆ ಪ್ರಕರಣದಲ್ಲಿ ಸುಹಾಸ್ ಮೊದಲ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ತನ್ನನ್ನು ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆಗರ್ವಾಲ್ ಹೇಳಿದ್ದಾರೆ.
ಸುಹಾಸ್ ಕೊಲೆ ಮಾಡಲು ಸಫ್ವಾನ್ ತಂಡಕ್ಕೆ ಆದಿಲ್ 5 ಲಕ್ಷ ರೂ. ನೀಡಿದ್ದ. ಈ 5 ಲಕ್ಷ ರೂಪಾಯಿಗಾಗಿ ಆದಿಲ್ ಫಂಡಿಂಗ್ ಮಾಡಿದ್ದ. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.
ಕೊಲೆ ಪ್ರಕರಣದಲ್ಲಿ ಬಂಧಿತರ ಪಟ್ಟಿ ಕೆಳಗಿನಂತಿವೆ.
- ಶಾಂತಿಗುಡ್ಡೆ ಪೇಜಾವರ ಗ್ರಾಮದ ನಿವಾಸಿ ಅಬ್ದುಲ್ ನಾಸಿರ್ ಅವರ ಪುತ್ರ ಅಬ್ದುಲ್ ಸಫ್ವಾನ್ (29) ಈತ ಚಾಲಕನಾಗಿ ದುಡಿಯುತ್ತಿದ್ದ.
- ಬಜ್ಪೆ ನಿವಾಸಿ ಅಬೂಬಕ್ಕರ್ ಅವರ ಪುತ್ರ ನಿಯಾಝ್ (28), ಈತ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
- ಕೆಂಜಾರು ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರ ಮುಹಮ್ಮದ್ ಮುಝಮ್ಮಿಲ್ (32), ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈತ ಕಳೆದ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದಾನೆ.
- ಕಳವಾರು ನಿವಾಸಿ ಮುಹಮ್ಮದ್ ಅವರ ಪುತ್ರ ಕಲಂದರ್ ಶಾಫಿ (31), ಈತ ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿ ದುಡಿಯುತ್ತಿದ್ದ.
- ಚಿಕ್ಕಮಗಳೂರಿನ ಕಳಸ ನಿವಾಸಿ ರಾಜೇಶ್ ಅವರ ಪುತ್ರ ರಂಜಿತ್ (19), ಈತ ಚಾಲಕನಾಗಿ ದುಡಿಯುತ್ತಿದ್ದ.
- ಚಿಕ್ಕಮಗಳೂರಿನ ಕಳಸ ನಿವಾಸಿ ಮಾರಿ ಮುತ್ತು ಅವರ ಪುತ್ರ ನಾಗರಾಜ್ (20), ಈತ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ.
- ಜೋಕಟ್ಟೆ ನಿವಾಸಿ ಅಬ್ದುಲ್ ಮಜೀದ್ ಅವರ ಪುತ್ರ ಮುಹಮ್ಮದ್ ರಿಝ್ವಾನ್ (28), ಈತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ.
- ಉಮರುಲ್ ಫಾರೂಕ್ ಅವರ ಪುತ್ರ ಆದಿಲ್ ಮೆಹರೂಫ್. ಈತ 2022 ರಲ್ಲಿ ಕೊಲೆಯಾದ ಫಾಝಿಲ್ ನ ಸಹೋದರ.



