ಮೂಡಿಗೆರೆ ಬಿಳಗುಳದ ಅಮರ್ ನಾಥ್ ಎಂಬುವವರ ಮನೆಯಂಗಳಕ್ಕೆ ಬಂದಿದ್ದ ಕಾಡಾನೆ
ಒಂಟಿ ಸಲಗವೊಂದು ಮೂಡಿಗೆರೆ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವೇಶಿಸಿ ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ ಕೆಲ ದಿನಗಳಿಂದ ಈ ಆನೆ ಗುಂಪಿನಿಂದ ಬೇರ್ಪಟ್ಟಿದ್ದು ಒಂಟಿಯಾಗಿ ತಿರುಗುತ್ತಿದೆ. ಈ ಆನೆಯು ಜನವಸತಿ ಪ್ರದೇಶಕ್ಕೆ ಪದೇ ಪದೇ ಲಗ್ಗೆ ಇಡುತ್ತಿದ್ದು, ಮನುಷ್ಯರ ಮೇಲೆಯೂ ದಾಳಿಗೆ ಪ್ರಯತ್ನಿಸುತ್ತಿದೆ. ಆನೆ ಕಾರ್ಯಪಡೆ ಸಿಬ್ಬಂದಿಯ ಮೇಲೆಯೂ ತಿರುಗಿ ಬರುತ್ತಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳಿಂದ ಮೂಡಿಗೆರೆ ಪಟ್ಟಣದ ಆಸುಪಾಸಿನಲ್ಲಿಯೇ ಈ ಆನೆ ಸಂಚರಿಸುತ್ತಿದೆ. ಶುಕ್ರವಾರ ರಾತ್ರಿ ಮೂಡಿಗೆರೆ ಬಿಳಗುಳ ಕೊಲ್ಲಿಬೈಲ್ ಗ್ರಾಮಗಳಲ್ಲಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಜನರ ಮೇಲೆ ದಾಳಿಮಾಡಲು ಪ್ರಯತ್ನಿಸಿದೆ. ಇತ್ತೀಚೆಗೆ ಮಾಕೋನಹಳ್ಳಿ ಸಮೀಪ ಬಾರದಹಳ್ಳಿ ಎಂಬಲ್ಲಿ ಮನೆಯ ಬಾಗಿಲಿನ ಸಮೀಪಕ್ಕೆ ಬಂದು ಮನೆಯವರ ಮೇಲೆ ದಾಳಿಮಾಡಲು ಪ್ರಯತ್ನಿಸಿದೆ.
ಈ ಆನೆಯು ಆಕ್ರಮಣಕಾರಿ ಪ್ರವೃತ್ತಿ ತೋರುತ್ತಿರುವುದರಿಂದ ಸೆರೆಹಿಡಿದು ಸಾಗಿಸಲು ತುರ್ತುಕ್ರಮ ವಹಿಸಲಾಗುತ್ತಿದೆ ಎಂದು ಡಿಎಫ್ಓ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಮೂಡಿಗೆರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಒಂಟಿ ಆನೆಯೊಂದನ್ನು ಸೆರೆಹಿಡಿಯಲು ಶನಿವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಆನೆ ಮೂಡಿಗೆರೆ ಪಟ್ಟಣ ಸಮೀಪ ಹಾರ್ಲಗದ್ದೆ, ಚಿಕ್ಕಳ ಭಾಗದಲ್ಲಿ ಇರುವುದನ್ನು ಅರಣ್ಯ ಸಿಬ್ಬಂದಿ ಗುರುತಿಸಿದ್ದು, ಕಾರ್ಯಾಚರಣೆಗೆ ಸಾಕಾನೆಗಳ ತಂಡ ಮತ್ತು ಅರವಳಿಕೆ ಚುಚ್ಚು ಮದ್ದು ನೀಡುವ ವೈದ್ಯರು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು.

ಗೆಂಡೇಹಳ್ಳಿ ಭಾಗದಲ್ಲಿದ್ದ ಈ ಒಂಟಿ ಸಲಗದ ಚಲನವಲನ ಗಮನಿಸಿಸುತ್ತಿದ್ದ ಅರಣ್ಯ ಇಲಾಖೆ, ಮೂಡಿಗೆರೆ ಪಟ್ಟಣ ಸಮೀಪ ಸಾಗಬಹುದೆಂದು ಮೊದಲೇ ಅಂದಾಜಿಸಿದ್ದರಿಂದ ಅರಣ್ಯ ಇಲಾಖೆ ಪಟ್ಟಣ, ಸೇರಿದಂತೆ ಬೀಜವಳ್ಳಿ, ಛತ್ರಮೈಧಾನ, ಕಡೇ ಮಾಡ್ಕಲ್, ಮೇಗಲಪೇಟೆ ಗ್ರಾಮದ ಜನರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದಿರಬೇಕೆಂದು ಶನಿವಾರ ಪ್ರಚಾರ ನಡೆಸಲಾಗಿತ್ತು. ಇದಿರಿಂದ ಜನರು ಕೂಡ ಎಚ್ಚೆತ್ತುಕೊಂಡಿದ್ದರು.
ಜನ ವಸತಿ ಪ್ರದೇಶಕ್ಕೆ ಒಂಟಿ ಸಲಗ ಕಾಲಿಟ್ಟ ಹಿನ್ನಲೆಯಲ್ಲಿ ಜನರ ಪ್ರಾಣ ರಕ್ಷಣೆಗಾಗಿ ಒಂಟಿ ಸಲಗ ಸೆರೆ ಹಿಡಿಯಲು ಅರಣ್ಯ ಇಲಾಖೆ ದಿಢೀರ್ ಸಿದ್ಧತೆ ಮಾಡಿಕೊಂಡಿತು. ಕಾರ್ಯಚರಣೆಗೆ ಮಹೇಂದ್ರ, ಭೀಮ, ಧನಂಜಯ, ಸುಗ್ರೀವ, ಏಕಲವ್ಯ ಮತ್ತು ಕಂಜಾನ್ ಒಟ್ಟು 6 ಸಾಕಾನೆಗಳನ್ನು ಕರೆ ತರಲಾಗಿತ್ತು. ಅಷ್ಟೊತ್ತಿಗಾಗಲೇ ಬಿಳಗುಳದಿಂದ ಸಾಗಿ ಚಿಕ್ಕಳ್ಳ ಸಮೀಪದ ಕಾರೆಹಳ್ಳಿ ಹತ್ತಿರ ಎಸ್ಟೇಟ್‍ವೊಂದರಲ್ಲಿ ಬೀಡು ಬಿಟ್ಟಿದ್ದ ಒಂಟಿ ಸಲಗ ಅಲ್ಲಿಂತ ತಪ್ಪಿಸಿಕೊಂಡಿದ್ದು, ಆದರೆ ಅದೇ ಸ್ಥಳದಲ್ಲಿ ಮತ್ತೊಂದು ಕಾಡಾನೆ ಕಾಣಿಸಿಕೊಂಡಿದ್ದರಿಂದ ನಿಗದಿತ ಆನೆಯನ್ನು ಬೇರ್ಪಡಿಸಿ ಸೆರೆಹಿಡಿಯಲು ಅಡ್ಡಿಯುಂಟಾಯಿತು ಎನ್ನಲಾಗಿದೆ. ಇದರಿಂದ ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿ ಸಾಕಾನೆಗಳನ್ನು ಸದ್ಯಕ್ಕೆ ವಾಪಾಸ್ಸು ಕಳುಹಿಸಲಾಗಿದೆ. ಉಪಟಳ ನೀಡುತ್ತಿರುವ ಕಾಡಾನೆ ಸೆರೆಗಾಗಿ ಅರಣ್ಯ ಇಲಾಖೆ ಪ್ರಯತ್ನ ಮುಂದುವರಿಸಿದೆ.



