ತುಳುನಾಡು ಮೂಲದ ಶ್ರೀ ಸತ್ಯಸಾರಮನಿ ಕಾನದ-ಕಟದ ದೈವಗಳನ್ನು ಕುಲದೈವಗಳೆಂದು ಆರಾಧಿಸುವ ಆದಿದ್ರಾವಿಡ ಸಮುದಾಯದವರು ಜಾತಿ ಸಮೀಕ್ಷೆಯಲ್ಲಿ ಉಪ ಜಾತಿಯನ್ನು ಗೊತ್ತಿಲ್ಲ ಎಂದು ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾಧ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಹಾಸನ, ಕೊಡಗು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಶ್ರೀ ಸತ್ಯಸಾರಮನಿ ಕಾನದ-ಕಟದ ದೈವಗಳನ್ನು ಕುಲದೈವಗಳೆಂದು ಆರಾಧಿಸುವ ತುಳು ಭಾಷಿಕ ಆದಿ ದ್ರಾವಿಡರು ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ತಲತಲಾಂತರದಿಂದ ನಮ್ಮ ಹಿರಿಯರಿಂದ ಉಪ ಜಾತಿ ಬಗ್ಗೆ ಹಾಗೂ ಕುಲದೈವದ ಇತಿಹಾಸ ತಿಳಿಯದ ಕಾರಣ ಜಾತಿಗಣತಿ ಸಮೀಕ್ಷೆಯಲ್ಲಿ ನಮ್ಮ ಸಮುದಾಯದವರು ಉಪ ಜಾತಿ ಗೊತ್ತಿಲ್ಲವೆಂದೇ ನಮೂದಿಸಬೇಕೆಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆಲೆಸಿರುವ ನಮ್ಮ ಸಮುದಾಯವದರು ಈ ಹಿಂದೆ ಉಪ ಜಾತಿ ಬಗ್ಗೆ ಅರಿವಿಲ್ಲದೇ ನಾನಾ ರೀತಿಯ ಉಪ ಜಾತಿಗಳ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಇದರಿಂದ ಸರಕಾರಕ್ಕೆ ನಮ್ಮ ಸಂಖ್ಯೆ ತಿಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಮ್ಮ ಸಮುದಾಯದವರೆಲ್ಲರೂ ಈ ಬಾರಿ ಒಗ್ಗಟ್ಟು ಪ್ರದರ್ಶಿಸಿ ಉಪ ಜಾತಿ ಗೊತ್ತಿಲ್ಲವೆಂದೇ ಬರೆಸಬೇಕು. ಮುಂದಿನ ದಿನದಲ್ಲಿ ನಮ್ಮ ಕುಲದೈವ ಹೆಸರು ಅಥವಾ ಬೇರೆ ಉತ್ತಮ ಹೆಸರನ್ನು ನಾಮಕರಣಗೊಳಿಸಲು ನಮ್ಮ ಸಂಘ ಶ್ರಮಿಸುತ್ತದೆ ಎಂದ ಅವರು, ಸಮೀಕ್ಷೆಗೆ ಬರುವ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಕೆಲವರು ಮನಬಂದಂತೆ ಅರ್ಜಿ ಭರ್ತಿ ಮಾಡುತ್ತಿದ್ದಾರೆಂಬ ದೂರು ಕೇಳಿ ಬರುತ್ತಿದೆ. ಅಂತಹ ಘಟನೆ ಕಂಡು ಬಂದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಆರ್.ಡಿ.ಸುರೇಶ್ ಕೊಪ್ಪ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಗುರುವಪ್ಪ ತೋಳೂರುಗುಡ್ಡ, ಸಹ ಕಾರ್ಯದರ್ಶಿ ಪಿ.ಬಿ.ಸುರೇಶ್, ರಾಜು ಗಬ್ಗಲ್, ಸಂತೋಷ್ ಡಿ.ಸಾಲಯಾನ, ಶಿವಪ್ಪ ಬಾಳೂರು ಉಪಸ್ಥಿತರಿದ್ದರು.



