ವಿದ್ಯೆ ವಿವೇಚನೆ ಕೊಡುತ್ತದೆ. ವಿದ್ಯೆ ಸಿಕ್ಕರೆ ಎಚ್ಚರದ-ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ, ಹೆಣ್ಣುಮಕ್ಕಳಿಗೆ ಹುಟ್ಟನಿಂದಲೇ ದಿವ್ಯಶಕ್ತಿ ಇರುತ್ತದೆ. ಗಂಡುಮಕ್ಕಳಿಗಿಂತ ಅಧಿಕ ಸಾಮರ್ಥ್ಯ ಸಹಜವಾಗಿರುತ್ತದೆ ಎಂದು ಸಾಹಿತಿ ವಿಮರ್ಶಕ ಡಾ.ಸತ್ಯನಾರಾಯಣ ಅಭಿಪ್ರಾಯಿಸಿದರು.
ಚಿಕ್ಕಮಗಳೂರು ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ನಗರದ ಎಸ್‍ಟಿಜೆ ಮಹಿಳಾ ಪದವಿ ಕಾಲೇಜಿನ ಸಾಂಸ್ಕøತಿಕ, ಕ್ರೀಡೆ, ಎನ್‍ಎಸ್‍ಎಸ್ ಮತ್ತಿತರ ಪಠ್ಯೇತರ ಚಟುವಟಿಕೆಗಳ ವಾರ್ಷಿಕ ಮುಕ್ತಾಯ ಸಮಾರಂಭದಲ್ಲಿಂದು ಅವರು ಸಮಾರೋಪ ಭಾಷಣ ಮಾಡಿದರು.
ಬಡತನದಿಂದ ಹೊರಬರಲು, ದೌರ್ಜನ್ಯದಿಂದ ಮುಕ್ತಿ ಪಡೆಯಲು ಶಿಕ್ಷಣ ಅತ್ಯಗತ್ಯ. ಹೆಣ್ಣುಮಕ್ಕಳಿಗೆ ಮದುವೆಯೆ ಅಂತಿಮವೆಂಬ ಭಾವನೆ ಸಮಾಜದಲ್ಲಿ ಸಾರ್ವತ್ರಿಕವಾಗಿದೆ. ವಾಸ್ತವವಾಗಿ ಘನತೆಯ ಬಾಳು ಮುಖ್ಯವೆಂಬುದನ್ನು ಅರಿಯಬೇಕಾಗಿದೆ. ಅನಿವಾರ್ಯವಾಗಿ ಕಾಲು ಕತ್ತರಿಸಬೇಕಾದ ಹೆಣ್ಣುಮಗುವನ್ನು ತಂದೆ-ತಾಯಿಯರೆ ದೆಹಲಿಯ ಸರಯೂ ನದಿಯಲ್ಲಿ ಹಾಕಿ ತಾವೇ ಪೊಲೀಸ್ ಠಾಣೆಗೆ ಹೋಗಿ ತಮ್ಮ ವಿರುದ್ಧವೇ ದೂರದಾಖಲಿಸಿಕೊಂಡ ಧಾರುಣ ಘಟನೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿತ್ತೆಂದು ಉಲ್ಲೇಖಿಸಿದ ಡಾ.ಸತ್ಯನಾರಾಯಣ, ಕಾಲೇ ಹೋದಮೇಲೆ ಹೆಣ್ಣಮಗುವನ್ನು ಮದುವೆ ಮಾಡುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುವ ಪೋಷಕರು ಮಗಳನ್ನೆ ನೀರಿಗೆಬಿಡುವ ತೀರ್ಮಾನ ಕೈಗೊಂಡಿದ್ದು ಈ ಘಟನೆ ಪೋಷಕರ ಮನಸ್ಥಿತಿಗೆ ಕೈಗನ್ನಡಿ ಎಂದು ವಿಷಾದಿಸಿದರು.
ಮದುವೆ, ಸರ್ಕಾರಿನೌಕರಿ ಅಂತಿಮ ಅಲ್ಲ ಎಂಬುದನ್ನು ಅರಿಯಬೇಕು. ಘನತೆಯ ಆತ್ಮಪ್ರಜ್ಞೆ ಕಟ್ಟಿಕೊಳ್ಳುವ ನಿಜಶಿಕ್ಷಣ ಪಡೆದರೆ ಜಾತಿ, ಧರ್ಮ, ಅಂತಸ್ತು ಮೀರಿ ಬಡತನದಿಂದಲೂ ಹೊರಬಂದು ಬದುಕಬಹುದು. ವೃತ್ತಿಯನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ಯುವಜನತೆಗೆ ಸಿಗಬೇಕು. ಘನತೆಯಿಂದ ಬದುಕುವ ವೃತ್ತಿಗಳೆಲ್ಲವೂ ಶ್ರೇಷ್ಠವೇ. ಆದರೆ ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದೇವೆ. ಬಹು ಬೇಡಿಕೆಯ ಹೆಚ್ಚು ಸಂಪಾದನೆಯಾಗುವ ಟೈಪಿಂಗ್-ಟೈಲರಿಂಗ್‍ನಂತಹ ವೃತ್ತಿಗಳು ನಿರ್ಲಕ್ಷ್ಯಕೊಳಗಾಗಿವೆ ಎಂದರು.
ಯುವತಿಯರು ಪ್ರೇಮ-ಕ್ರಷ್ ನಡುವಿನ ಅಂತರವನ್ನು ಅರ್ಥಮಾಡಿಕೊಳ್ಳಬೇಕು. ಕ್ಷಣಿಕ ಆಕರ್ಷಣೆಗಾಗಿ ಹಿಂದೆಮುಂದೆ ನೋಡದೆ ಮನೆಬಿಟ್ಟುಹೋಗಿ ಪುನಃ ವಾಪಸ್ ಬರಲಾಗದೆ ಜೀವನ ವ್ಯರ್ಥಗೊಳಿಸಿಕೊಂಡ ಅನೇಕ ಘಟನೆಗಳಿಂದ ಪಾಠ ಕಲಿಯಬೇಕು. ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವಾಗ ಆತನ ಆರ್ಥಿಕ ಸಾಮಥ್ರ್ಯವನ್ನು ಎಚ್ಚರಿಕೆಯಿಂದ ಗಮನಿಸಬೇಕು ಎಂದ ಡಾ.ಸತ್ಯನಾರಾಯಣ, ಮನೆಯಲ್ಲಿ ಹಿರಿಯರು ಪರಿಶೀಲಿಸಿ ಇಚ್ಛಿಸಿದವರೊಂದಿಗೆ ಬಾಳುವುದರಲ್ಲಿ ಸುಭದ್ರತೆ ಅಧಿಕ ಎಂದರು.
ಮಕ್ಕಳ ಆಸಕ್ತಿ-ಅಭಿರುಚಿಯನ್ನು ಪೋಷಕರು ಗೌರವಿಸಬೇಕು. ಮೈಸೂರಿನ ಕುಕ್ಕರಳ್ಳಿ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದ ಪೂರ್ಣಚಂದ್ರತೇಜಸ್ವಿ ಅವರಿಗೆ ಅಧ್ಯಾಪಕರಾಗಿ ನೇಮಕ ಮಾಡಿಕೊಂಡ ಆದೇಶಪತ್ರವನ್ನು ಅಂಚೆಅಣ್ಣ ಕೊಟ್ಟಾಗ ಅದನ್ನು ನೋಡಿದ ತೇಜಸ್ವಿ ಅದರಲ್ಲೆ ದೋಣಿಮಾಡಿ ಕೆರೆಗೆಬಿಟ್ಟು ‘ದೋಣಿ ಸಾಗಲಿ ಮುಂದೆ ಹೋಗಲಿ…’ ಹಾಡುತ್ತಾ ಮನೆಗೆ ಬರುತ್ತಾರೆ. ಮೈಸೂರು ವಿ.ವಿ. ಉಪಕುಲಪತಿಗಳಾಗಿದ್ದ ಡಾ.ಕುವೆಂಪು ತೇಜಸ್ವಿ ಯವರನ್ನು ನಿಂದಿಸದೆ ‘ಮುಂದೇನು’ ಎಂಬ ಪ್ರಶ್ನೆ ಮಗನ ಮುಂದಿಟ್ಟರು. ಕೊನೆಗೆ ಮಗನ ಇಚ್ಛೆಯನ್ನು ಗೌರವಿಸಿ ಮೂಡಿಗೆರೆಯಲ್ಲಿ ಕಾಫಿತೋಟ ಖರೀದಿಸಲು ಬ್ಯಾಂಕ್ ಸಾಲ ಕೊಡಿಸಿದರು. ಇಚ್ಛಿಸಿದಂತೆ ಬದುಕಿದ ತೇಜಸ್ವಿ ಮುಂದೆ ಮೂಡಿಗೆರೆಯಲ್ಲಿ ಸಾಧನೆ ಮಾಡಿ ‘ಪಂಪಪ್ರಶಸ್ತಿ’ಗೆ ಭಾಜನರಾದರು. ಜಗತ್ತಿನಲ್ಲೆ ಶ್ರೇಷ್ಠ ತಂದೆ ಕುವೆಂಪು ಎಂದು ಹೇಳುತ್ತಿದ್ದರು. ಇಂತಹ ಘಟನೆಗಳು ಸಮಾಜಕ್ಕೆ ಮಾದರಿಯಾಗಬೇಕೆಂದ ಡಾ.ಸತ್ಯನಾರಾಯಣ, ವಾಸ್ತವಿಕ ಬದುಕಿನ ಬಗ್ಗೆ ಚಿಂತಿಸಬೇಕೆಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ನಿವೃತ್ತ ಸೇನಾಧಿಕಾರಿ ಶಿವಶಂಕರ ರಡ್ಡಿ ಮುಖ್ಯಅತಿಥಿಗಳಾಗಿ ಮಾತನಾಡಿ, ಶಿಸ್ತು, ದೇಶಭಕ್ತಿ ಬದುಕಿಗೆ ಅವಶ್ಯಕ. ವಿದ್ಯೆ ಕಲಿಕೆಗೆ ವಯಸ್ಸು ಮುಖ್ಯವಲ್ಲ. ಸೇನೆಯಿಂದ ನಿವೃತ್ತಿಗೊಂಡ ಬಳಿಕ ಪೊಲೀಸ್ ಸಬ್‍ಇನ್ಸಪೆಕ್ಟರ್ ಪರೀಕ್ಷೆ ಬರೆದು ಮುಂದೆ ಡಿಎಸ್‍ಪಿವರೆಗೆ ವಿವಿಧ ಇಲಾಖಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಬಡ್ತಿ ಹೊಂದಿದ್ದನ್ನು ವಿವರಿಸಿದರು.
ಭಾರತೀಯ ಸೇನೆ ವಿಶ್ವದಲ್ಲೆ ವಿಶಿಷ್ಟವಾದದ್ದು. ಸೈನ್ಯ ಎಂದರೆ ಯುವಜನರಿಗೆ ರೋಮಾಂಚನವಾಗುತ್ತದೆ. ಕಾರ್ಗಿಲ್‍ಯುದ್ಧ ‘ವಿಜೇತ್’ ಸೇರಿದಂತೆ ಮೂರುಯುದ್ಧಗಳಲ್ಲಿ ಭಾಗವಹಿಸಿದ ಅದೃಷ್ಟ ತಮ್ಮದಾಗಿತ್ತು. ಪಾಕಿಸ್ತಾನದಲ್ಲಿ ಕೆಲಕಾಲ ಗೂಢಚರ್ಯೆ ನಡೆಸಿದ ಅನುಭವವೂ ಇದೆ. ದೇಶ ಕಾಪಾಡುವುದು ದೇಶವಾಸಿಗಳೆಲ್ಲರ ಕರ್ತವ್ಯ. ಹೆಣ್ಣುಮಕ್ಕಳೂ ಸೇರಿದಂತೆ ಯುವಜನತೆ ಸೇನೆ ಸೇರಬೇಕು. ಸರ್ಕಾರ, ಅಧಿಕಾರಿಗಳು, ವಿಜ್ಞಾನಿಗಳು ಸೇರಿದಂತೆ ಹಲವರ ಪರಿಶ್ರಮ ಮತ್ತು ಸಂಶೋಧನೆಯ ಫಲವಾಗಿ ಭಾರತೀಯ ಸೇನೆಯ ಬತ್ತಳಿಕೆ ಸುಭದ್ರವಾಗಿದೆ ಎಂದ ಶಿವಶಂಕರ ರಡ್ಡಿ, ಅತ್ಯುತ್ತಮ ಸಲಕರಣೆಗಳು ನಮ್ಮಲ್ಲಿವೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಎಸ್.ಜೆ.ಭಾರತಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಶಿಕ್ಷಣದ ಜೊತೆಗೆ ಮೌಲ್ಯಯುತವಾದ ಸದ್ಗುಣಗಳನ್ನು ಕಲಿತರೆ ಜೀವನ ಸಾರ್ಥಕ ಪಡಿಸಿಕೊಳ್ಳಬಹುದು. ಛಲ, ಹಠ, ಕಠಿಣ ಪರಿಶ್ರಮ ಇದ್ದರೆ ಏನನ್ನಾದರೂ ಸಾಧಿಸಬಹುದು. ನಿರಂತರ ಅಧ್ಯಯನಶೀಲತೆ ಮುಖ್ಯ. ಶಾಲಾಕಾಲೇಜು ದಿನಗಳಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಕೊಡುವುದರಿಂದ ಜ್ಞಾನ ಸಂಪಾದಿಸಬಹುದೆಂದರು.
ಕಾಲೇಜು ಸಲಹಾಮಂಡಳಿ ಅಧ್ಯಕ್ಷ ಡಾ.ಎಸ್.ವಿನಾಯಕ ಪ್ರತಿಭಾವಂತರನ್ನು ಸನ್ಮಾನಿಸಿ, ಆಟೋಟ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಇಂಗ್ಲೀಷ್‍ನಲ್ಲಿ ಸಂಶೋಧನಾ ಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದ ಕಾಲೇಜಿನ ಉಪನ್ಯಾಸಕ ಡಾ.ಎಸ್.ಮುಜೀಬ್ ಹಾಗೂ ಸೇವಾನಿವೃತ್ತಿಗೊಂಡ ಪ್ರಾಂಶಪಾಲೆ ಭಾರತಿ ಅವರನ್ನು ಸನ್ಮಾನಿಸಲಾಯಿತು.
ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಎಂ.ಆರ್.ಚಂದ್ರಶೇಖರ್ ಪ್ರಾಸ್ತಾವಿಸಿದ್ದು, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಗೀತಾ ಸ್ವಾಗತಿಸಿ, ಯಶಸ್ವಿನಿ ವಂದಿಸಿದರು. ಪ್ರಿಯಾಂಕಾ ಪ್ರಾರ್ಥಿಸಿದ್ದು, ಲಿಖಿತಾ ಮತ್ತು ಸಹನಾ ನಿರೂಪಿಸಿದರು. ಸಲಹಾಸಮಿತಿ ಸದಸ್ಯೆ ಲತಾಶೇಖರ್, ಉಪನ್ಯಾಸಕರುಗಳಾದ ಡಾ.ಚಂದ್ರಶೇಖರ್ ಮತ್ತು ಹೇಮಂತ್, ಮುಖ್ಯಶಿಕ್ಷಕಿ ಚೇತನಾಗಣೇಶ್ ವೇದಿಕೆಯಲ್ಲಿದ್ದರು. ಸಂಜೆಯವರೆಗೂ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.



