ಮಲೆನಾಡಿನಾದ್ಯಂತ ಗಾಳಿ ಮಳೆ ಅತಿಯಾಗಿದ್ದು, ಜನಜೀವನ ಅಸ್ತವ್ಯಸ್ತ ವಾಗಿದೆ. ಮೂಡಿಗೆರೆ ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನಗೂಲ್ ಮಂಡಲದಿಣ್ಣೆ ಗ್ರಾಮದ ರಸ್ತೆ ಮಳೆಗೆ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಶಾಲಾ ಮಕ್ಕಳು ಕೂಡ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಪೈಪುಗಳು ಮಣ್ಣು ಸಮೇತ ಕೊಚ್ಚಿ ಹೋಗುತ್ತದೆ. ಜನರು ದಿನ ಸಾಮಗ್ರಿ ಹಾಗೂ ಕೆಲಸಕ್ಕೆ ಸಾಗಲು ತೊಂದರೆ ಪಡುವಂತಾಗಿದೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಗೋಪಾಲ್, ಉಪಾಧ್ಯಕ್ಷೆ ಸ್ವರೂಪ ,ಸದಸ್ಯರಾದ ಸ್ಮಿತಾ, ಎ.ಎನ್.ರಘು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಬಳಿಕ ಮಾತನಾಡಿದ ಅಧ್ಯಕ್ಷೆ ಸುಶೀಲ ‘ಇದು ಗ್ರಾಮ ಪಂಚಾಯಿತಿ ಅನುದಾನದಿಂದ ರಸ್ತೆ ಕಾಮಗಾರಿ ಮಾಡಲು ಸಾಧ್ಯವಿಲ್ಲ.ಇದಕ್ಕೆ ಹೆಚ್ಚಿನ ಅನುದಾನ ಬೇಕಿದೆ.ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಹಾಗೂ ಶಾಸಕರ ಅನುದಾನದಿಂದ ಈ ರಸ್ತೆ ಕಾಮಗಾರಿ ಮಾಡಬಹುದು. ಈ ಬಗ್ಗೆ ಶಾಸಕರಿಗೆ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ಎಂದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಇದ್ದರು.



