ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂ.9ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಬೃಹತ್ ರೈತ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ರೈತ ಬಾಂಧವರು ಆಗಮಿಸಬೇಕೆಂದು ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್‍ಕುಮಾರ್ ಕರೆ ನೀಡಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಫಾ.ನಂ50 ಮತ್ತು 53ಯಲ್ಲಿ ಸರಕಾರವೇ ರೈತರಿಗೆ ಮಂಜೂರು ಮಾಡಿದ್ದ ಕೃಷಿ ಭೂಮಿಯನ್ನು ಕಿತ್ತುಕೊಂಡು ಸಣ್ಣ ರೈತರನ್ನು ಬೀದಿಗೆ ತರುವ ಕೆಲಸ ಮಾಡಿದೆ. ಈಗಾಗಲೇ ತಾಲೂಕಿನಲ್ಲಿ ಸುಮಾರು 2600 ಅರ್ಜಿ ವಜಾ ಮಾಡಲಾಗಿದೆ. ಅಲ್ಲದೇ ಗ್ರಾಮಗಳೇ ಡೀಮ್ಡ್ ಫಾರೆಸ್ಟ್ ಆಗಿ ಹೋಗಿದೆ. ಹೀಗೆ ಸರಕಾರದ ದ್ವಂದ್ವ ನೀತಿಗಳಿಂದ ರೈತರು ಅನೇಕ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಎದುರಾಗಿರುವ ಸಮಸ್ಯೆ ನಮ್ಮನ್ನಾಳಿದ ಸರಕಾರಗಳ ರೈತ ವಿರೋಧಿ ನೀತಿಯಿಂದಲೇ ಹೊರತು, ಬ್ರಿಟೀಷರ ಕಾಲದಲ್ಲಾದ ಸಮಸ್ಯೆಗಳಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರ ಮನಸ್ಸು ಮಾಡಿದರೆ ರೈತರ ಎಲ್ಲಾ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂದು ಹೇಳಿದರು.
ಕಾರ್ಯದರ್ಶಿ ಸುರೇಂದ್ರ ಹ್ಯಾರಗುಡ್ಡೆ ಮಾತನಾಡಿ, ರಾಜ್ಯ ಸರಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ. ಎಷ್ಟೋ ಮಂದಿ ರೈತರ ಮಕ್ಕಳು ಉದ್ಯೋಗ ಹರಸಿ ನಗರಗಳತ್ತ ತೆರಳಿ, ಅಲ್ಲಿ ಉದ್ಯೋಗ ಸಿಗದೇ ಇಲ್ಲಿಯೇ ಕೃಷಿ ಮಾಡಬೇಕೆಂದುಕೊಂಡರೆ, ಸರಕಾರ ಕೃಷಿ ಜಮೀನನ್ನೇ ಕಿತ್ತುಕೊಂಡು ಯುವಕರನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ. ಇಲ್ಲಿನ ಕೆಲ ರಾಜಕಾರಣಿಗಳು ಒತ್ತುವರಿ ಬಿಡಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವದು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಮೊದಲು ಬಿಡಬೇಕೆಂದ ಅವರು, ರೈತರನ್ನು ಹಗುರವಾಗಿ ಕಾಣುತ್ತಿರುವ ಸರಕಾರಕ್ಕೆ ರೈತರ ಶಕ್ತಿ ಪ್ರದರ್ಶಿಸುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ರೈತರ ಎಲ್ಲಾ ಸಮಸ್ಯೆಗಳು ಬಗೆಹರಿಸಿಕೊಳ್ಳಲು ಎಲ್ಲಾ ಪಕ್ಷ, ಕನ್ನಡಪರ ಹಾಗೂ ರೈತ ಸಂಘಟನೆಗಳು ಜೂ.9ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಂಡಿದ್ದು, ನಮ್ಮ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ಅರ್ಧಕ್ಕೆ ಕೈ ಬಿಡದಂತೆ, ಸಂಪೂರ್ಣ ಯಶಸ್ವಿಯಾಗುವವರೆಗೂ ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ವೇದಿಕೆ ಉಪಾಧ್ಯಕ್ಷರಾದ ಸುರೇಶ್ ಬಂಕೇನಹಳ್ಳಿ, ರವಿ ಮಗ್ಗಲಮಕ್ಕಿ, ಸಹ ಕಾರ್ಯದರ್ಶಿ ಪ್ರಸಾದ್ ಬಕ್ಕಿ, ಮಂಜುನಾಥ್ ಹಳೆಕೋಟೆ ಉಪಸ್ಥಿತರಿದ್ದರು.



