sahithya 1

 

 

ಸಾಹಿತ್ಯ ಸಮ್ಮೇಳನ ಕೇವಲ ನುಡಿಜಾತ್ರೆಯಲ್ಲ. ಸಾಹಿತ್ಯ ನಿತ್ಯ ನಿರಂತರ ಚಿಂತನೆಯ ದಾರಿಯಾಗಬೇಕು. ನಮ್ಮಿಂದ ಈ ಸಮಾಜಕ್ಕೆ ಒಳ್ಳೆದಾಗುವ ಬಗೆ ಹಾಗೂ ಯಾವ ದಾರಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆ ಚರ್ಚಿಸಬೇಕು ಎಂದು ಸಮ್ಮೇಳನಾಧ್ಯಕ್ಷೆ ಲಕ್ಷ್ಮೀ ಶ್ಯಾಮರಾವ್ ತಿಳಿಸಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಪ್ರಥಮ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷರಾಗಿ ಅವರು ಮಾತನಾಡಿದರು.

ಗೃಹಿಣಿ ಗೃಹ ಮುಚ್ಚತೆ ಎಂಬ ಮಾತಿನಂತೆ ವೃತ್ತಿನಿರತ ಮಹಿಳೆಯರು ಮನೆಯ ನಿರ್ವಹಣೆ ಮಾಡುತ್ತಾ ಇರುವ ಸಮಯವನ್ನೆ ದಿಟ್ಟತನದಿಂದ ಸಾಧನೆ ಮಾಡುವ ಮಹಿಳೆಯರು ಸಾಧಿಸಲು ಹೊರಟ ಮಹಿಳೆಯರು ಇಂದು ಭಾರತದ ಉದ್ದಗಲಕ್ಕೂ ಇದ್ದಾರೆನ್ನುವುದು ಸತ್ಯವಾಗಿದೆ ಎಂದರು.

ಪ್ರಾಚೀನ ಕಾಲದಿಂದಲೂ ಇಲ್ಲಿ ಮಹಿಳೆಯರು ಸ್ಥಾನಮಾನಕ್ಕೆ ಅಡ್ಡಿ ಆತಂಕಗಳು ಇದ್ದೇ ಇವೆ. ಮಹಿಳೆಯರ ಹಾದಿ ಅಷ್ಟೇನು ಸುಗಮ ಹಾದಿಯಲ್ಲ. ಇಲ್ಲಿ ಯಾವ ಯೋಜನೆಗಳು ಬಂದರೂ ಸಮಗ್ರವಾದ ಬದಲಾವಣೆ ಆಗುತ್ತಿಲ್ಲ. ಇಲ್ಲಿ ನಮ್ಮ ಹೋರಾಟವನ್ನು ಪುರುಷರ ವಿರುದ್ಧ ಎಂದುಕೊಳ್ಳದೆ ಮಹಿಳಾ ಶೋಷಣೆಯ ವಿರುದ್ಧ ಹೋರಾಟವೆಂದುಕೊಳ್ಳಬೇಕು ಎಂದರು.

ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಮೈಸೂರು ವಿಶ್ರಾಂತ ಸಹ ಪ್ರಾಧ್ಯಾಪಕಿ ಡಾ. ಎಸ್.ಪಿ.ಉಮಾ ದೇವಿ ಪುತ್ತೂರು ;

ಮಹಿಳೆಯರ ಸಾಹಿತ್ಯ ಕ್ಷೇತ್ರದ ಸಾಧನೆ ನಿನ್ನೆ-ಮೊನ್ನೆಯಿಂದಲ್ಲ, ಹತ್ತನೇ ಶತಮಾನದಿಂದಲೇ ಜಾನಪದ ಗೀತೆಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಮಣಿಯರು ತಮ್ಮದೇ ಶೈಲಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದು  ಹೇಳಿದರು.

ಹಿಂದಿನಿಂದಲೇ ಮಹಿಳೆಯರು ಜಾನಪದ ಗೀತೆಗಳನ್ನು ಕಟ್ಟಿ ಬೆಳೆಸಿದ ಪರಿಣಾಮ ವಿಶ್ವಮಾನ್ಯದಲ್ಲಿ ಮನ್ನಣೆ ಗಳಿಸಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಇಂದು ಕನ್ನಡಭಾಷೆಗೆ ಇರುವಂಥ ಜೀವಂತಿಕೆ ಬೇರೆ ಯಾವುದೇ ಭಾಷೆಗೆ ದೊರೆತಿಲ್ಲ. ಹಿರಿಯರ ಜಾನಪದವು ಜನವಾಣಿ, ಕವಿವಾಣಿಯಾಗಿ ಇಂದು ಸುಗಂಧಭರಿತ ಹೂವಾಗಿ ಎಲ್ಲೆಡೆ ಹಬ್ಬಿಕೊಂಡಿದೆ ಎಂದರು.

ಪುರುಷರಂತೆಯೇ ಹೆಣ್ಣು ಸಾಹಿತ್ಯ ಲೋಕದಲ್ಲಿ ಹಿಂದೆ ಬಿದ್ದಿಲ್ಲ. ಜೀವನದ ನೋವುನಲಿವು, ಬದುಕಿನ ಬವಣೆ, ಕರುಣಜನಕ ಸ್ಥಿತಿಗತಿಯನ್ನು ಉಕ್ಕಿ ಹರಿಸಿ ಬರವಣಿಗೆ ಮುಖೇನಾ ಪುಸ್ತಕಗಳನ್ನು ರಚಿಸಿ ಸಮಾಜದ ಮುಂದಿಟ್ಟು ಸಾಧನೆ ಮಾಡಲು ಸಾಹಿತ್ಯ ಕ್ಷೇತ್ರ ಸ್ಪೂರ್ತಿ ನೀಡಿದೆ ಎಂದು ಹೇಳಿದರು.

ಹನ್ನೆರಡನೇ ಶತಮಾನದಲ್ಲಿ ಹಲವಾರು ವಚನಗಾರ್ತಿಯರು ಕನ್ನಡದಲ್ಲಿ ವಚನಗಳನ್ನು ರಚಿಸಿ ಒಂದು ಚಳವಳಿಯನ್ನೇ ನಡೆಸಿದರು. ಮಹಿಳೆಯರು ತಮ್ಮ ಸಾಹಿತ್ಯದಲ್ಲಿ ಸಮಾಜದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಸಾಹಿತ್ಯ ರಚಿಸತೊಡಗಿದ್ದನ್ನು ಕೆಲವು ಹಂತಗಳಲ್ಲಿ ಗುರುತಿಸಲಾಗಿದ್ದು, ಸಾಹಿತ್ಯ ಎಂದಿಗೂ ಒಂದು ಸಮಾಜಕ್ಕೆ ಸೀಮಿತಗೊಳ್ಳದೇ ಪ್ರತಿ ಜನಾಂಗದಲ್ಲೂ ಹುಟ್ಟಿಕೊಂಡಿತು ಎಂದರು.

ಇತಿಹಾಸ ಚರಿತ್ರೆಗಳ ಪುಟಗಳಲ್ಲಿ ಸಂಚಿಹೊನ್ನಮ್ಮ, ಶೃಂಗಾರಮ್ಮ, ತಿರುಮಲಾಂಬ, ಅಕ್ಕಮಹಾದೇವಿ ಸೇರಿದಂತೆ ಅನೇಕ ಮಹಾನ್ ವಚನಗಾರ್ತಿಯರು ಸಾಹಿತ್ಯಕ್ಕೆ ಕೊಡುಗೆ ನೀಡಿದರು. ಕಾಲಕಳೆಯದಂತೆ ಆಧುನಿಕತೆ ಜಗತ್ತಿನಲ್ಲಿ ಬಹಳಷ್ಟು ಕವಿಯತ್ರಿಯರು ಉದಯಿಸಿ ವಿಶಿಷ್ಟ ಹಾಗೂ ವಿಭಿನ್ನ ಶೈಲಿಯಲ್ಲಿ ಕಥೆ, ಕವನಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ ಎಂದರು.

ಸಾಹಿತ್ಯ ಮತ್ತು ಕಲೆ ಎಂದರೆ ಮನಸ್ಸಿನಲ್ಲಿರುವ ಗೊಂದಲ, ಅಶಾಂತಿ ಹಾಗೂ ನಕಾರಾತ್ಮಕ ಚಿಂತನೆಗಳನ್ನು ಹೊರಹಾಕುವ ಭವ್ಯವಾದ ಸಾಧನ. ಯಾವುದೇ ವ್ಯಕ್ತಿ ತನ್ನನ್ನು ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ, ಜೀವನದಲ್ಲಿ ಸಂತೋಷವನ್ನು ಕಾಣಲು ಸಾಧ್ಯ. ಜೊತೆಗೆ ಹೃದಯಭಾಷೆ ಮರೆತರೆ ಬದುಕು ಶೂನ್ಯವಾಗಲಿದೆ ಎಂಬುದು ಅರಿಯಬೇಕು ಎಂದು ಹೇಳಿದರು.

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಮಹಿಳಾ ಕವಿಯತ್ರಿಯರ ಧ್ವನಿ ಹಾಗೂ ಹೆಜ್ಜೆ ಗುರುತಿಸಿ ಈ ವೇದಿಕೆ ಸಾಕ್ಷಿಯಾಗಬೇಕು. ಈ ಸಮ್ಮೇಳನ ಮಹಿಳಾ ಸಾಹಿತ್ಯ ಪ್ರೇಮಿಗಳಿಗೆ ಹೊಸದಾರಿಯಾಗುವ ಜೊತೆಗೆ ಶಾಲೆಗಳಲ್ಲಿ ಪುಟ್ಟ ಹೆಣ್ಣುಮಕ್ಕಳ ಸಾಹಿತ್ಯದ ಆಸಕ್ತಿ ಬೆಳೆಸುವಂಥ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಶುಭ ಹಾರೈಸಿದರು.

ನಾಡಿನ ಕನ್ನಡ ಸಾಹಿತ್ಯದಲ್ಲಿ 12ನೇ ಶತಮಾನದ ಅಕ್ಕಮಹಾದೇವಿ, ಸಾವಿತ್ರಿಬಾಯಿ ಫುಲೆ ಕಾಲದಿಂದ ಇಂದಿನ ಸುಧಾಮೂರ್ತಿ, ಗೌರಿಲಂಕೇಶ್, ಪ್ರತಿಭಾ ನಂದಕುಮಾರ್ ಸೇರಿದಂತೆ ಹಿರಿಯ-ಕಿರಿಯರು ಸೇರಿದಂತೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಗಳನ್ನು ನೀಡಿರುವುದು ನೆನಪಿಸಿಕೊಳ್ಳಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಾಹಿತ್ಯ ಲೋಕಕ್ಕೆ ರಾಜಾಶ್ರಯಕ್ಕಿಂತ ಪ್ರಜಾಶ್ರಾಯ ಮುಖ್ಯವಾಗಿದೆ. ರಾಜಾಶ್ರಯವಿದ್ದಲ್ಲಿ ಸಾಹಿತ್ಯ ಬೆಳವಣಿಗೆಯಾಗದು. ಪ್ರಜಾಶ್ರಯದಿಂದ ಸಾಹಿತ್ಯ ಬೆಳೆದಿರುವ ಕಾರಣ ವಿಶ್ವದೆಲ್ಲೆಡೆ ಪಸರಿಸಲು ಕಾರಣವಾಗಿದೆ. ಹಿರಿಯರ ಗಾಧೆ, ವಚನ, ಜಾನಪದ ಗೀತೆಗಳು ಹುಟ್ಟಿದ್ದು ಜನರ ಮದ್ಯದಿಂದಲೇ ಎಂಬುದು ಅರಿತು ಸಾಗಿದರೆ ಯಶಸ್ಸು ಲಭಿಸಲಿದೆ ಎಂದರು.

ಇತ್ತೀಚೆಗೆ ಕುಟುಂಬದ ನಡುವೆಯೇ ಮಾತೃಭಾಷೆ ಕಳೆದುಹೋಗುವ ಆತಂಕ ಕಾಡುತ್ತಿದೆ. ಅಪ್ಪ-ಅಮ್ಮ ಎನ್ನುವ ಬದಲು ಮಮ್ಮಿ-ಡ್ಯಾಡಿ ಸಂಸ್ಕೃತಿ ಆಧುನಿಕತೆಯಲ್ಲಿ ಬೆಳೆಯುತ್ತಿದೆ. ಮೊದಲು ಕುಟುಂಬದಲ್ಲಿ ಭಾಷಾ ಅಭಿಮಾನ ಬೆಳೆಸಿಕೊಂಡರೆ, ಸಮಾಜದಲ್ಲಿ ಕನ್ನಡ ತನವನ್ನು ಎತ್ತಿಹಿಡಿಯಬಹುದು. ಕುಟುಂಬದಲ್ಲೇ ಭಾಷಾಭಿಮಾನ ಇಲ್ಲದಿದ್ದರೆ ಸಂಪೂರ್ಣ ಶೂನ್ಯವಾಗುತ್ತದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲೇ ಪ್ರಪ್ರಥಮ ಭಾರಿಗೆ ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಂದು ಕಾರ್ಯಕ್ರಮವು ಜಿಲ್ಲೆಯಿಂದಲೇ ಪ್ರಥಮವಾಗಿ ಆರಂಭಿಸಲಾಗುತ್ತಿದೆ. ಗಮಕ, ಕಾವ್ಯಕಮ್ಮಟ, ದಾಸ, ವಚನ ಸಾಹಿತ್ಯ ಸಮ್ಮೇಳನಗಳು ದೊಡ್ಡಮಟ್ಟಿನಲ್ಲಿ ನಡೆಸುವುದು ಮೂಲ ಆಶಯವಾಗಿದೆ ಎಂದರು.

ವಿಶೇಷವಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರ ದುಡಿಯುತ್ತಿರುವ ರಾಜ್ಯದ ಕಸಾಪ ಜಿಲ್ಲಾಧ್ಯಕ್ಷರಿಗೆ ಊರಿನಿಂದ ರಾಜಧಾನಿಗೆ ಅಥವಾ ಇನ್ನಿತರೆ ತೆರಳಲು ಸರ್ಕಾರ ಉಚಿತ ಪಾಸ್ ನೀಡಿ ಪ್ರೋತ್ಸಾಹಿಸುತ್ತಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು 47 ವರ್ಷಗಳು ಕಳೆದಿದ್ದು ಈ ಬಾರಿಗೆ ಜಿಲ್ಲೆಯಲ್ಲಿ ಸಮ್ಮೇಳನಕ್ಕೆ ಅವಕಾಶ ಕಲ್ಪಿಸಲು ಶಾಸಕರುಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಸಮ್ಮೇಳನ ಅಧ್ಯಕ್ಷತೆಯನ್ನು ಲಕ್ಷ್ಮೀ ಶ್ಯಾಮರಾವ್ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಹೆಚ್.ಕೆ. ವಿಜಯಲಕ್ಷ್ಮೀ ವಿಶ್ವನಾಥ್ ಸಮ್ಮೇಳನಾಧ್ಯಕ್ಷರ ಪರಿಚಯ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಬೆಂಗಳೂರು ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಕಸಾಪ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಜೇಗೌಡ, ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಸ್.ವೆಂಕಟೇಶ್, ಕೋಶಾಧ್ಯಕ್ಷ ಬಿ.ಪ್ರಕಾಶ್, ಸಾಹಿತಿ ಶೈಲಾ ನಾಗರಾಜ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನುಮಧುಕರ್, ಕನ್ನಡಸೇನೆ ಜಿಲ್ಲಾಧ್ಯಕ್ಷೆ ಪಿ.ಸಿ.ರಾಜೇಗೌಡ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಸಂಸ್ಕೃತಿ ಚಿಂತಕಿ ಎ. ವರ್ಷ, ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ, ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ