ನೀಟ್ ವಿವಾದ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನೀಟ್-ಯುಜಿ 2026 ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಆನಂತರ ಸಿಜೆಪಿ ಅಡಿಯಲ್ಲಿ ಸಂಘಟಿತರಾದ ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದ್ದಾರೆ. ದೇಶದ ಯುವಜನತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ನಾನು ವಿದ್ಯಾರ್ಥಿ, ಶಿಕ್ಷಕ ಹಾಗೂ ಶಿಕ್ಷಣ ಸುಧಾರಣೆಗೆ ಸಮರ್ಪಿತನಾಗಿದ್ದೇನೆ. ಸದೃಢ, ಸಮಾವೇಶಿತ ಮತ್ತು ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯೇ ಬಲಿಷ್ಠ ರಾಷ್ಟ್ರದ ಅಡಿಪಾಯ ಎಂಬುದು ನನ್ನ ಅಚಲ ನಂಬಿಕೆಯಾಗಿದೆ.
ದೇಶದ ಯುವಜನರ ಆಶಯಗಳು, ಭಾವನೆಗಳು ಹಾಗೂ ಅವರ ನ್ಯಾಯಸಮ್ಮತ ನಿರೀಕ್ಷೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಭಾರತದ ಯುವಪೀಳಿಗೆಯ ಕನಸುಗಳನ್ನು ನನಸಾಗಿಸುವುದು ನಮ್ಮೆಲ್ಲರ ರಾಜಕೀಯ ಹಾಗೂ ಸಾಮಾಜಿಕ ಜೀವನದ ನೈತಿಕ ಸಂಕಲ್ಪವಾಗಿದೆ. ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ರಾಷ್ಟ್ರಸೇವೆ ಮಾಡುವ ಅವಕಾಶ ನನಗೆ ದೊರೆತಿದ್ದಕ್ಕಾಗಿ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.
ಆದರೆ, 2026ರ ಮೇ 3ರಂದು ನಡೆದ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದವು. ಭಾರತ ಸರ್ಕಾರವು ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಸಿಬಿಐಗೆ ವಹಿಸಿತು. ಪರೀಕ್ಷೆಯನ್ನ ರದ್ದುಗೊಳಿಸಿ ಮರುಪರೀಕ್ಷೆಯ ದಿನಾಂಕವನ್ನು ಘೋಷಿಸಲಾಯಿತು. ಜೊತೆಗೆ, ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಸಿಬಿಟಿ (Computer-Based Test) ಮಾದರಿಯಲ್ಲಿ ನಡೆಸುವ ನಿರ್ಧಾರವೂ ಕೈಗೊಳ್ಳಲಾಯಿತು.
ಈ ಅವಧಿಯಲ್ಲಿ ನಮ್ಮ ಪ್ರಮುಖ ಆದ್ಯತೆ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷೆಯನ್ನ ಸುಗಮವಾಗಿ ನಡೆಸುವುದಾಗಿತ್ತು. ಇದಕ್ಕಾಗಿ Whole of Government Approach ಅಡಿಯಲ್ಲಿ ಕಾರ್ಯನಿರ್ವಹಿಸಲಾಯಿತು. ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರಗಳು, ವಿಶೇಷವಾಗಿ ಜಿಲ್ಲಾ ಆಡಳಿತಗಳು ಮಹತ್ವದ ಪಾತ್ರ ವಹಿಸಿದವು. ವಿದ್ಯಾರ್ಥಿಗಳು, ಪೋಷಕರು ಹಾಗೂ ಪಾಲಕರ ಸಹಕಾರದಿಂದ 2026ರ ಜೂನ್ 21ರಂದು ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಮೊದಲ ದಿನದಿಂದಲೇ ಈ ವಿಷಯದ ಸಂಪೂರ್ಣ ಜವಾಬ್ದಾರಿಯನ್ನ ನಾನು ಹೊತ್ತಿದ್ದೇನೆ ಮತ್ತು ಯಾವುದೇ ಸಂದರ್ಭದಲ್ಲೂ ಈ ಪರಿಸ್ಥಿತಿಯಿಂದ ಹಿಂದೆ ಸರಿದಿಲ್ಲ. ಪರೀಕ್ಷಾ ಮಾಫಿಯಾದ ಕಾರಣದಿಂದ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದು, ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಬಾರದು ಎಂಬುದು ನನ್ನ ದೃಢ ಸಂಕಲ್ಪವಾಗಿತ್ತು.
ಜುಲೈ 16ರಂದು ಪ್ರಕಟವಾದ NEET-UG ಫಲಿತಾಂಶಗಳು ತೃಪ್ತಿಕರವಾಗಿದ್ದವು. ಬಡ ಹಿನ್ನೆಲೆಯಿಂದ ಬಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಯಶಸ್ಸು ಗಳಿಸಿದರು. ಆದರೆ, ಈ ಅವಧಿಯಲ್ಲಿಯೂ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಜವಾಬ್ದಾರಿಯುತ ಹುದ್ದೆಗಳಲ್ಲಿ ಕುಳಿತಿದ್ದ ಕೆಲವರು ಅಡ್ಡಿಪಡಿಸಲು ಪ್ರಯತ್ನಿಸಿದರು. ಇದು ನನ್ನ ಮನಸ್ಸಿಗೆ ಅಪಾರ ನೋವುಂಟುಮಾಡಿದೆ.
ನಾನು ಸದಾ ನಮ್ಮ ಪ್ರಜಾಪ್ರಭುತ್ವದ ಶಕ್ತಿಯ ಮೇಲೆ ಅಚಲ ನಂಬಿಕೆ ಇಟ್ಟಿದ್ದೇನೆ ಹಾಗೂ ಯುವಜನರ ಆಶಯಗಳು, ಕನಸುಗಳು ಮತ್ತು ನಿರೀಕ್ಷೆಗಳಿಗೆ ಆಳವಾದ ಗೌರವವನ್ನು ತೋರಿದ್ದೇನೆ. ಅವರು ಕೇವಲ ಭಾರತದ ಭವಿಷ್ಯವಷ್ಟೇ ಅಲ್ಲ, ಹೊಸ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಪಕರು ಮತ್ತು ಭವಿಷ್ಯದ ಶಿಲ್ಪಿಗಳೂ ಆಗಿದ್ದಾರೆ. ಕಳೆದ 10 ದಿನಗಳ ಬೆಳವಣಿಗೆಗಳನ್ನು ಗಮನಿಸಿದಾಗ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ. ಭಾರತದ ಯುವಶಕ್ತಿಯೇ ಈ ದೇಶದ ನಿಜವಾದ ಶಕ್ತಿ. ದೇಶದ ಯುವಶಕ್ತಿಯನ್ನು ಗೊಂದಲದ ದುಷ್ಟಚಕ್ರದಲ್ಲಿ ಸಿಲುಕಲು ಬಿಡುವುದಿಲ್ಲ ಎಂಬುದು ನನ್ನ ಸಂಕಲ್ಪ.
ಜಂತರ್-ಮಂತರ್‌ನಲ್ಲಿ ಹಾಗೂ ದೇಶದಾದ್ಯಂತ ಉಂಟಾದ ಪರಿಸ್ಥಿತಿಯನ್ನು ರಾಷ್ಟ್ರವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಾರದು, ದೇಶದ ಏಕತೆ ಅಬಾಧಿತವಾಗಿರಬೇಕು, ಭಾರತದ ಒಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ತೊಡಕುಗಳಲ್ಲಿ ಸಿಲುಕಬಾರದು, ನಮ್ಮ ಮಕ್ಕಳು ತಮ್ಮ ಸಮಯವನ್ನ ಓದು ಮತ್ತು ವೃತ್ತಿಜೀವನ ನಿರ್ಮಾಣದತ್ತ ಕೇಂದ್ರೀಕರಿಸಬೇಕು ಎಂಬ ಉದ್ದೇಶದಿಂದ ನಾನು ನನ್ನ ರಾಜೀನಾಮೆಯನ್ನು ಮಾನ್ಯ ಪ್ರಧಾನಮಂತ್ರಿ ಅವರಿಗೆ ಸಲ್ಲಿಸಿದ್ದೇನೆ.
ಆಧರಣೀಯ ಪ್ರಧಾನಮಂತ್ರಿ ಅವರ ಮಾರ್ಗದರ್ಶನ, ವಿಶ್ವಾಸ ಹಾಗೂ ನಿರಂತರ ಸಹಕಾರಕ್ಕಾಗಿ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ, ಸಚಿವ ಸಂಪುಟದ ನನ್ನ ಎಲ್ಲ ಗೌರವಾನ್ವಿತ ಸಹೋದ್ಯೋಗಿಗಳು, ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ನನ್ನೊಂದಿಗೆ ಕೆಲಸ ಮಾಡುವ ಅವಕಾಶ ದೊರೆತ ಎಲ್ಲರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ರಾಷ್ಟ್ರಸೇವೆಯೇ ನನ್ನ ಜೀವನದ ಅತ್ಯುನ್ನತ ಆದ್ಯತೆಯಾಗಿದೆ. ಅದಕ್ಕಾಗಿ ನಾನು ಸದಾ ಸಮರ್ಪಿತನಾಗಿರುತ್ತೇನೆ. ಪ್ರಭು ಶ್ರೀಜಗನ್ನಾಥರ ಆಶೀರ್ವಾದದಿಂದ ಮುಂದೆಯೂ ಭಾರತ ಮಾತೆ, ಒಡಿಶಾದ ಜನತೆ ಹಾಗೂ ದೇಶದ ಯುವಜನರ ಆಶಯಗಳನ್ನು ಈಡೇರಿಸಲು ಸಾಧ್ಯವಾದ ಪ್ರತಿಯೊಂದು ರೀತಿಯಲ್ಲೂ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ.
ನಿಮ್ಮ,
ಧರ್ಮೇಂದ್ರ ಪ್ರಧಾನ್


