ಚಿಕ್ಕಮಗಳೂರು ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗುತ್ತಿಲ್ಲ. ಈ ಬಗ್ಗೆ ರೈತ ಸಂಘ ಹಾಗೂ ವಿವಿಧ ಸಂಘಟನೆಯಿಂದ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ತಾಳ್ಮೆ ಪರೀಕ್ಷೆ ಮಾಡಬಾರದೆಂದು ರಾಜ್ಯ ರೈತ ಸಂಘ ಮತ್ತು ಗ್ರೀನ್ ಆರ್ಮಿ ಇಂಡಿಯಾದ ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್‍ಗೌಡ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್‍ಪೋಸ್ಟ್ ಸರ್ಕಲ್ ವರೆಗೆ ರಸ್ತೆ ಅಗಲೀಕರಣ ಮಾಡಲು ಕಳೆದ 2 ವರ್ಷದ ಹಿಂದೆ 400 ಕೋಟಿ ರೂ ಅನುದಾನ ಬಂದರೂ ಇದೂವರೆಗೂ ಅಗಲೀಕರಣದ ಕೆಲಸ ಪ್ರಾರಂಭಿಸಿಲ್ಲ. ಇದನ್ನು ಗಮನಿಸಿದರೆ ರಸ್ತೆ ಅಗಲೀಕರಣ ಮಾಡಬಾರದೆಂದು ಕಟ್ಟಡ ಮಾಲೀಕರ ಲಾಭಿ ನಡೆಸಿ, ಅಧಿಕಾರಿಗಳ ಜೇಬು ಭರ್ತಿ ಮಾಡುತ್ತಿದ್ದಾರೆಂಬ ಸಂಶಯ ಮೂಡುತ್ತಿವೆ. ಇದೆಲ್ಲಾ ನಿಜವಲ್ಲವಾದರೆ ಕೂಡಲೇ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಬೇಕು. ಇಲ್ಲವಾದರೆ ಎಲ್ಲಾ ಸಂಘಟನೆಗಳು ಸೇರಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಎಸ್.ಪಿ.ರಾಜು ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಫಿ, ಕಾಳುಮೆಣಸು, ಅಡಕೆ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದು, ಇದಕ್ಕೆ ಪ್ರತಿ ವರ್ಷಕ್ಕೆ ಬೆಳೆ ಸಮೀಕ್ಷೆ ನಡೆಸುವುದರಲ್ಲಿ ಅರ್ಥವಿಲ್ಲ. ಕನಿಷ್ಟ 10 ವರ್ಷಕ್ಕೊಮ್ಮೆ ಬೆಳೆ ಸಮೀಕ್ಷೆ ನಡೆಸಿದರೆ ರೈತರಿಗೆ ಅನುಕೂಲವಾಗುತ್ತದೆ. ತೊಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರಕಾರದ ಗಮನಕ್ಕೆ ತರಬೇಕು. ಬೆಳೆ ವಿಮೆಗೆ ಫಾರ್ಮರ್ ಆಪ್‍ನಲ್ಲಿ ದಾಖಲೆಗಳನ್ನು ಅಪ್‍ಲೋಡ್ ಮಾಡಿದರೆ, ಅಧಿಕಾರಿಗಳು ಅನುಮೋದನೆ ನೀಡುತ್ತಿಲ್ಲ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಸರಕಾರ ಯಾವುದೇ ಯೋಜನೆ ಮಾಡಿದರೂ ಅದನ್ನು ವೈಜ್ಷಾನಿಕವಾಗಿ ಮಾಡಬೇಕೆಂದು ಆಗ್ರಹಿಸಿದರು. ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಸಾಲ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಹಿರಿಯ ರೈತ ಮುಖಂಡ ರಾಮಚಂದ್ರೇಗೌಡ ನಿಡಗೂಡು, ಲಿಂಗಪ್ಪ ಹೊಸ್ಕೆರೆ ಉಪಸ್ಥಿತರಿದ್ದರು.


