ಬಿಜೆಪಿ ಕಾರ್ಯಕರ್ತೆ ಸಂಗೀತ ಪ್ರಸಾದ್ ಎಂಬುವರ ಮೇಲೆ ಗೂಂಡಾಗಳ ರೀತಿಯಲ್ಲಿ ಕೊಲೆ ಬೆದರಿಕೆ ಹಾಕಿರುವ ಶಾಸಕರ ಅಪ್ತ ಕಾರ್ಯಕರ್ತ ಚಂದ್ರು ಒಡೆಯರ್ ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಪಕ್ಷದ ವತಿಯಿಂದ ಮೂಡಿಗೆರೆಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಬಗ್ಗೆ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಾಗಾಗಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, 1 ವರ್ಷದಿಂದ ಹೇರಿಗೆ ವಾರ್ಡ್‍ಗೆ ಬಾಗಿಲು ಹಾಕಿರುವುದು ಹಾಗೂ ರಸ್ತೆ ಗುಂಡಿಗಳ ಬಗ್ಗೆ ಸಂಗೀತ ಪ್ರಸಾದ್ ಅವರು ಪ್ರಶ್ನಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬೆಳಕು ಚೆಲ್ಲಿದ್ದಾರೆ. ಇದನ್ನು ಸಹಿಸಿಕೊಳ್ಳದ ಶಾಸಕರ ಆಪ್ತ ಚಂದ್ರು ಅವರು ವಕೀಲೆ ಸಂಗೀತ ಅವರು ಮೂಡಿಗೆರೆಗೆ ಬಂದರೆ ಚಪ್ಪಲಿ, ಕಲ್ಲಿನಿಂದ ಹೊಡೆಸುವೆ ಎಂಬ ಕೊಲೆಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಚಂದ್ರು ಅವರ ವಿರುದ್ಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಕಾಗ್ರೇಸ್ ಸರಕಾರದ ಒತ್ತಡದಿಂದ ಪ್ರಕರಣ ದಾಖಲಿಸಿಲ್ಲ. ಹಾಗಾಗಿ ಇನ್ನೆರಡು ದಿನದಲ್ಲಿ ಪ್ರಕರಣ ದಾಖಲಿಸಿ ಚಂದ್ರು ಅವರನ್ನು ಬಂಧಿಸದಿದ್ದರೆ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಿನ್ನಮತದಿಂದ ಕಾಂಗ್ರೆಸ್ ಹೊಡೆದು ಮೂರು ಬಾಗಿಲಾಗಿದೆ. ಮೂಲ ಹಿರಿಯ ಕಾಂಗ್ರೆಸ್ ಮುಖಂಡರನ್ನು ದೂರವಿಟ್ಟು, ಸಮಾಜಘಾತುಕ ವ್ಯಕ್ತಿಗಳನ್ನು ಜೊತೆಯಲ್ಲಿಟ್ಟುಕೊಂಡಿರುವುದು ಹಾಗೂ ಶಾಸಕರ ಆಪ್ತರೆಂಬ ಕಾರಣಕ್ಕೆ ಚಂದ್ರು ಅವರ ವಿರುದ್ಧ ಪ್ರಕರಣ ದಾಖಲಾಗದಿರುವ ಬಗ್ಗೆ ಇಡೀ ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜನರು ಗಮನಿಸುತ್ತಿದ್ದಾರೆ. ಶಾಸಕರು ಕೂಡ ಮಹಿಳೆಯಾಗಿದ್ದು, ಓರ್ವ ಮಹಿಳೆಗೆ ಅವರ ಆಪ್ತರಿಂದಲೇ ನಿಂಧನೆಯಾಗಿರುವುದು ದುರಾದೃಷ್ಟ. ಮಹಿಳೆಯರ ಮೇಲೆ ಅಗೌರವ ತೋರಿಸುವುದನ್ನು ಬಿಜೆಪಿ ಸಹಿಸುವುದಿಲ್ಲ. 2 ದಿನದಲ್ಲಿ ಚಂದ್ರು ಅವರನ್ನು ಬಂಧಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿ.ಜೆ.ಪಿ. ಮೂಡಿಗೆರೆ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಮುಖಂಡರಾದ ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ವೆಂಕಟೇಶ್ ಕುರುವಂಗಿ, ಪಂಚಾಕ್ಷರಿ ಹಾಲೂರು, ಸಚಿನ್ ಬಾನಳ್ಳಿ, ಲೋಕೇಶ್ ಮರ್ಕಲ್, ಎಂ.ಎಸ್.ಸುಜಿತ್, ವಿನಯ್ ಹಳೆಕೋಟೆ, ರಘುಪತಿ, ನಯನ ತಳವಾರ ಮತ್ತಿತರರಿದ್ದರು.


