ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾ.ಪಂ. ವ್ಯಾಪ್ತಿಯ ಪ್ರಯಾಣಿಕರ ತಂಗುದಾಣಗಳು(ಬಸ್ ನಿಲ್ದಾಣ) ಸೂಕ್ತ ನಿರ್ವಹಣೆ ಇಲ್ಲದೇ ಪಾಳುಕೊಂಪೆಯಾಗಿ ಮಾರ್ಪಟ್ಟಿವೆ. ಇದರಿಂದ ಬಸ್ ಗಾಗಿ ಬರುವ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊರುಬಗೆ, ಗೌಡಹಳ್ಳಿ, ಬೈದುವಳ್ಳಿ, ಹಿಂಗಡಿ, ಕುಂಬರಡಿ ಮುಂತಾದ ಗ್ರಾಮಗಳಲ್ಲಿ ಇರುವ ಪ್ರಯಾಣಿಕರ ತಂಗುದಾಣಗಳು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿವೆ. ಬಸ್ ನಿಲ್ದಾಣದೊಳಗೆ ಆಗಂತುಕರು ಮದ್ಯಪಾನ ಮಾಡಿ, ಖಾಲಿ ಮದ್ಯದ ಬಾಟಲಿಗಳು, ಗುಟ್ಕಾ ಪ್ಯಾಕೆಟ್‍ಗಳು ಹಾಗೂ ಇತರೆ ತ್ಯಾಜ್ಯವನ್ನು ಅಲ್ಲಿಯೇ ಬಿಸಾಡುತ್ತಿರುವುದರಿಂದ ಬಸ್ ನಿಲ್ದಾಣ ಕಸದ ರಾಶಿಯಾಗಿ ಮಾರ್ಪಟ್ಟಿದ್ದು, ದುರ್ವಾಸನೆ ಹರಡುತ್ತಿದೆ. ಬಸ್ಸಿಗಾಗಿ ಕಾಯುವ ಶಾಲಾ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

ಅಲ್ಲದೇ ಬಸ್ ನಿಲ್ದಾಣದ ಈ ಅವ್ಯವಸ್ಥೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇಲ್ಲಿ ಪ್ರತಿನಿತ್ಯ ಮದ್ಯಪಾನ ಮಾಡುವರ ವಿರುದ್ಧ ಸ್ಥಳೀಯ ಗ್ರಾ.ಪಂ. ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವ ಜತೆಗೆ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಹಾಗೆಯೇ ಸಾರ್ವಜನಿಕರು ಸಹ ಬಸ್ ನಿಲ್ದಾಣಗಳ ಸ್ವಚ್ಚತೆಯನ್ನು ಕಾಪಾಡಲು ಗಮನ ಹರಿಸಬೇಕು. ಇದು ಕೇವಲ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತೆಯಲ್ಲ. ಬಹುತೇಕ ಎಲ್ಲಾಕಡೆ ಗ್ರಾಮೀಣ ಭಾಗದ ಪ್ರಯಾಣಿಕರ ತಂಗುದಾಣಗಳು ಅವ್ಯವಸ್ಥೆಯಿಂದ ಕೂಡಿದ್ದು, ಉಪಯೋಗಕ್ಕೆ ಬಾರದಂತಾಗಿವೆ. ಮದ್ಯವ್ಯಸನಿಗಳ, ಜೂಜಾಟದ ಅಡ್ಡಗಳಾಗಿ ಮಾರ್ಪಟ್ಟಿವೆ. ಬಹುತೇಕ ತಂಗುದಾಣಗಳು ಮೇಲ್ಚಾವಣಿ ಕಿತ್ತುಹೋಗಿ ಸೋರುತ್ತಿವೆ. ಸುಣ್ಣ ಬಣ್ಣ ಕಾಣದೇ ವರ್ಷಗಳೇ ಆಗಿವೆ.

ಗ್ರಾಮೀಣ ಭಾಗದಲ್ಲಿ ಬಸ್ ತಂಗುದಾಣಗಳಿದ್ದರೂ ಅವುಗಳು ಉಪಯೋಗಕ್ಕೆ ಬಾರದೇ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಸ್ ಗಾಗಿ ರಸ್ತೆಬದಿಯಲ್ಲೇ ಕಾದು ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಅತಿವೃಷ್ಟಿಯಿದ್ದು, ವರ್ಷದ ಮೂರ್ನಾಲ್ಕು ತಿಂಗಳು ವಿಪರೀತ ಮಳೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಮಳೆಯಲ್ಲಿಯೇ ನಿಂತು ಬಸ್ ಗಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಅನೇಕ ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರೂ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸಿಲ್ಲ.
• ಪ್ರವೀಣ್ ಬೈದುವಳ್ಳಿ, ಸಾಮಾಜಿಕ ಕಾರ್ಯಕರ್ತ


