ಬ್ಯಾಂಕ್ ಗಳು ಸರ್ಫೇಸಿ ಕಾಯ್ದೆಯನ್ನು ಜಾರಿಗೊಳಿಸಿ ರೈತರ ಮೇಲೆ ಸವಾರಿ ನಡೆಸುತ್ತಿವೆ. ಸಾಲ ಮರುಪಾವತಿ ಮಾಡಲು ವಿಳಂಬವಾದರೆ ರೈತರ ಭೂಮಿಯನ್ನು ಆನ್ ಲೈನ್ ಮೂಲಕ ಜಮೀನು ಹರಾಜು ಮಾಡಲಾಗುತ್ತದೆ. ರೈತರಿಗೆ ಮಾರಕವಾದ ಸರ್ಫೇಸಿ ಕಾಯ್ದೆಯನ್ನು ರೈತರ ಮೇಲೆ ಹೇರದಂತೆ ಕೇಂದ್ರ ಸರ್ಕಾರ ಕಾನೂನು ರೂಪಿಸಿ ಬ್ಯಾಂಕ್ ಗಳಿಗೆ ಆದೇಶ ನೀಡಬೇಕು ಎಂದು ರೈತ ಸಂಘ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಎಚ್ಚರಿಕೆ ನೀಡಿದರು.
ಸರ್ಫಿಸಿ ಕಾಯ್ದೆಯಿಂದ ತೋಟವನ್ನು ಬ್ಯಾಂಕ್ ಸಾಲದ ನೆಪದಲ್ಲಿ ಆನ್ ಲೈನ್ ಮೂಲಕ ಹರಾಜು ನಡೆಸಿದ್ದರಿಂದ ಬೇಸತ್ತ ದೇವರುಂದ ಗ್ರಾಮದ ರೈತ ದಂಪತಿಗಳಾದ ವಿಜಯ್ ಮತ್ತು ಪಾರ್ವತಿ ದಯಮರಣಕ್ಕಾಗಿ ಕಳೆದವಾರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದ್ದರು. ಮೂಡಿಗೆರೆ ಪಟ್ಟಣದಲ್ಲಿರುವ ಸಂತ್ರಸ್ತ ವಿಜಯ್ ಅವರ ಮನೆಗೆ ಮಂಗಳವಾರ ರೈತ ಸಂಘ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಭೇಟಿ ನೀಡಿ, ಅನಾಹುತ ಮಾಡಿಕೊಳ್ಳದಂತೆ ಧೈರ್ಯ ತುಂಬಿದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಸರ್ಫೇಸಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಸದನದಲ್ಲಿ ಒತ್ತಾಯಿಸಿದ ಬಳಿಕ ಸರ್ಫೇಸಿ ಕಾಯ್ದೆ ವ್ಯಾಪ್ತಿಗೆ ಕಾಫಿ ಬೆಳೆ ಬರುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೂ ಸಹ ಬ್ಯಾಂಕ್ ಗಳು ಹರಾಜು ಪ್ರಕ್ರಿಯೆ ಮುಂದುವರಿಸುತ್ತಿವೆ. ಇದರಿಂದ ಕೇಂದ್ರ ಸಚಿವರ ಹೇಳಿಕೆಗೆ ಬೆಲೆ ಇಲ್ಲದಂತಾಗಿದೆ. ಸರ್ಫೇಸಿ ಕಾಯ್ದೆ ಜಾರಿಗೊಂಡ ಬಳಿಕ ಬಹಳಷ್ಟು ಕಾಫಿ ತೋಟ ಬೆಳೆಗಾರರ ಕೈಯಿಂದ ತಪ್ಪಿ ಹೋಗಿದೆ. ಅಂತಹ ತೋಟಗಳು ಬಂಡವಾಳ ಶಾಹಿಗಳ ಪಾಲಾಗಿದೆ.
ಸರ್ಫೇಸಿ ಕಾಯ್ದೆಯಿಂದಾಗಿ ವಿಜಯ್ ಮತ್ತು ಪಾರ್ವತಿ ದಂಪತಿಗಳ 8 ಎಕರೆ ಕಾಫಿ ತೋಟವನ್ನು ಬೆಂಗಳೂರಿನ ಉದ್ಯಮಿಗಳಿಗೆ ಬ್ಯಾಂಕ್ 89.50 ಲಕ್ಷ ರೂಗೆ ಹರಾಜು ಮಾಡಿದೆ. ಹರಾಜಿನಲ್ಲಿ ಖರೀದಿಸಿರುವ ವ್ಯಕ್ತಿ ತೋಟಕ್ಕೆ ಪ್ರವೇಶಿಸಲು ಬಂದರೆ ಗೋ ಬ್ಯಾಕ್ ಚಳುವಳಿ ನಡೆಸಲಾಗುವುದು. ದಂಪತಿಗಳು ಕಳೆದವಾರ ತಹಸಿಲ್ದಾರ್ ಮೂಲಕ ದಯಾಮರಣಕ್ಕಾಗಿ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದುವರೆಗೂ ಜಿಲ್ಲೆಯ ಜನಪ್ರತಿನಿಧಿಗಳಾಗಲಿ, ಬೆಳೆಗಾರರ ಸಂಘಟನೆಗಳಾಗಲಿ, ಕಾಫಿ ಮಂಡಳಿ ಪ್ರತಿನಿಧಿಗಳಾಗಲಿ ವಿಜಯ್ ಅವರ ಮನೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿಲ್ಲ. ಇಂಥವರಿಂದ ರೈತರು ನ್ಯಾಯ ನಿರೀಕ್ಷಿಸುವುದಾದರೂ ಹೇಗೆ ಎಂದು ಮುಖಂಡರು ಪ್ರಶ್ನಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಕೇಂದ್ರ ಸರ್ಕಾರ ಬೆಳೆಗಾರರನ್ನು ಒಕ್ಕಲಿಬ್ಬಿಸಲು ತಯಾರಿ ನಡೆಸಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಚಿಕ್ಕಮಗಳೂರು, ಹಾಸನ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿದ್ದರು. ಈಗಿನ ಸರ್ಕಾರ ಕಿಸಾನ್ ಸಮ್ಮಾನ್ ಎಂಬ ಪ್ರಯೋಜನಕ್ಕೆ ಬಾರದ ವಾರ್ಷಿಕ 6 ಸಾವಿರ ರೂ. ನೀಡುವ ಯೋಜನೆ ಜಾರಿಗೊಳಿಸಿದ್ದು ಬಿಟ್ಟರೆ ಬೇರೆನನ್ನು ನೀಡಿಲ್ಲ. ಸರ್ಫೇಸಿ ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಈ ಬಗ್ಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಬೇಕು. ಇಲ್ಲವಾದರೆ ರೈತ ಚಳುವಳಿ ಆರಂಭವಾಗಲಿದೆ. ಹಾಗಾದರೆ ಕೇಂದ್ರ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧ ಸುಂದರೇಶ್ ಮಾತನಾಡಿ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಕಸ್ತೂರಿ ರಂಗನ್ ವರದಿ ಮತ್ತು ಸರ್ಫೇಸಿ ಕಾಯ್ದೆಯನ್ನು ತಡೆಹಿಡಿದಿದೆ. ಸುಪ್ರೀಂ ಕೋರ್ಟಿಗೆ ಅಫಿಡವಿಟ್ ನೀಡಿ ರೈತರ ನೇರವಿಗೆ ಧಾವಿಸಿದೆ. ಕೇಂದ್ರ ಸರ್ಕಾರ ಅಧಿಕಾರಿಗಳನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಅಧಿಕಾರಿಗಳ ಆರ್ಭಟ ಮಿತಿಮೀರಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಇದೆ ರೀತಿ ಮುಂದುವರೆದರೆ. ರೈತರು 6 ತಿಂಗಳು ಜಮೀನಿನಲ್ಲಿ ಬೆಳೆ ಬೆಳೆಯುವುದನ್ನು, ಕಾರ್ಮಿಕರು ಒಂದುವಾರ ಕೆಲಸ ನಿಲ್ಲಿಸಿದರೆ ಸರ್ಕಾರದ ಬುಡವೆ ಅಲುಗಾಡಲು ಆರಂಭವಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಗುರುಶಾಂತಪ್ಪ, ಕೆಪಿಸಿಸಿ ವಕ್ತಾರ ರವೀಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜಪ್ಪ, ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಹ್ಯಾರಗುಡ್ಡೆ ಸುರೇಂದ್ರ, ರಾಜೇಂದ್ರ ಕಣಚೂರು, ಡಿ.ಜಿ.ರಮೇಶ್ ಉಪಸ್ಥಿತರಿದ್ದರು.



