ದುಡಿಯುವ ಸಾಮಾಥ್ರ್ಯ ಮತ್ತು ಶ್ರಮ ಯಾರಲ್ಲಿ ಇರುವುದಿಲ್ಲವೋ ಅವರು ಸಮಾಜದಲ್ಲಿ ಯಾವ ಸಾಧನೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನಿವೃತ್ತ ಉಪನ್ಯಾಸಕಿ ಸಾವಿತ್ರಿ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ಜೈಭೀಮ್ ಸಭಾಂಗಣದಲ್ಲಿ ಸ್ವತಃಶ್ಚಲಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ನಾನಾ ರೀತಿಯ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿರುವುದು ನಾವಿಂದು ಕಾಣುತ್ತಿದ್ದೇವೆ. ಯಾವುದೇ ವೃತ್ತಿ ಮಾಡುವಾಗ ಕಾನೂನು ಬದ್ದವಾಗಿ ಹಾಗೂ ಸಂಯಮದಿಂದ ಮಾಡಬೇಕು. ಆಟೋ ಚಾಲಕರು ಕೇವಲ ಆಟೋ ಚಲಾಯಿಸುವುದು ಮಾತ್ರವಲ್ಲ. ಒಂದು ಸಮಾಜ ಸೇವೆ ಕೂಡ ಆಗಿದೆ. ಅಪಘಾತ ಸೇರಿದಂತೆ ತುರ್ತು ಸಂದರ್ಭದಲ್ಲಿ ಆಟೋ ಚಾಲಕರೆ ಮೊದಲ ಪಾತ್ರ ವಹಿಸುವುದರಿಂದ ವೃತ್ತಿಯಲ್ಲಿ ಕೀಳರಿಮೆ ಬೇಡ ಎಂದು ಹೇಳಿದರು.
ಆಟೋ ಸಂಘದ ಗೌರವಾಧ್ಯಕ್ಷ ಎಂ.ಹೆಚ್. ಅಮರನಾಥ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಇನ್ನೂ 30 ವರ್ಷ ಬದುಕಿದ್ದರೆ ಈ ದೇಶ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿತ್ತು. ಅವರು ಶಿಕ್ಷಣ ಪಡೆಯುವಾಗ ಅನುಭವಿಸಿದ ಕಷ್ಟ ಈಗ ಸಂಪೂರ್ಣ ಮರೆಯಾಗಿದೆ. ಶಿಕ್ಷಣಕ್ಕೆ ಸರಕಾರ ಹೆಚ್ಚು ಒತ್ತು ನೀಡುತ್ತಿದ್ದು, ಆಟೋ ಚಾಲಕರು ಅಂಬೇಡ್ಕರ್ ಅವರ ಆಶಯದಂತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆ ಅಲಂಕರಿಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಚಂದ್ರೇಶ್ ವಹಿಸಿದ್ದರು. ನೂತನ ಅಧ್ಯಕ್ಷ ಗಣೇಶ್ ಬಾಳೆಗದ್ದೆ, ಗೌರವಾಧ್ಯಕ್ಷ ತಮ್ಮಣ್ಣ, ಉಪಾಧ್ಯಕ್ಷ ಅನಿಲ್, ಪ್ರಧಾನ ಕಾರ್ಯದರ್ಶಿ ರುದ್ರೇಶ್ ಕಡಿದಾಳ್, ಸಹ ಕಾರ್ಯದರ್ಶಿ ಶ್ರೇಯಸ್, ಯು.ಬಿ.ನಾಗೇಶ್, ಜಯಾನಂದ, ಪುಟ್ಟಣ್ಣ, ಪ್ರಕಾಶ್, ಮಂಜುನಾಥ್, ಲೋಕೇಶ್ ಮತ್ತಿತರಿದ್ದರು.



