ಚಿಕ್ಕಮಗಳೂರು ಜಿಲ್ಲಾ ಸವಿತಾ ಸಮಾಜದಿಂದ ವಾಪಸ್ ಪಡೆದಿರುವ ಒಂದು ಎಕರೆ ಜಮೀನನ್ನು ಅತಿ ಹಿಂದುಳಿದಿರುವ ಸವಿತಾ ಸಮಾಜದ ಜನಾಂಗದ ಅಭಿವೃದ್ಧಿಗಾಗಿ ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರು ಸಂಘಕ್ಕೆ ಮರಳಿ ನೀಡಬೇಕೆಂದು ಆಗ್ರಹಿಸಿ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಚಿಕ್ಕಮಗಳೂರು ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ್ ಸಂಕಲ್ಪ ಮಾತನಾಡಿ ; ಜಿಲ್ಲಾಧ್ಯಂತ ಇರುವ ಸವಿತಾ ಸಮಾಜದ ಬಂಧುಗಳ ಏಳಿಗೆಗಾಗಿ ಸಮುದಾಯ ನಿರ್ಮಾಣಕ್ಕಾಗಿ ಹಾಗು ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಹಿಂದುಳಿದ ಸಮುದಾಯಗಳಿಗೆ ತಲಾ ಒಂದು ಎಕರೆ ಜಮೀನನ್ನು ಹಿರೇಮಗಳೂರು ಗ್ರಾಮದ ಸರ್ವೆ ನಂಬರ್ 539 ರಲ್ಲಿ ಈ ಹಿಂದೆ ಮಂಜೂರು ಮಾಡಿತ್ತು. ಅದರಂತೆ ಅತಿ ಹಿಂದುಳಿದ ಮತ್ತು ಕಡಿಮೆ ಜನಸಂಖ್ಯೆ ಇರುವ ನಮ್ಮ ಸಮುದಾಯಕ್ಕೂ ಕೂಡ ಒಂದು ಎಕರೆ ಜಮೀನು ಮಂಜೂರಾಗಿತ್ತು. ಆದರೆ ಅತಿ ಹಿಂದುಳಿದ ಸಮುದಾಯವಾಗಿರುವ ನಮ್ಮ ಸವಿತಾ ಸಮಾಜದ ಅಂದಿನ ಹಿರಿಯರಿಗೆ ಸರ್ಕಾರಕ್ಕೆ ಕಟ್ಟಬೇಕಾದ ಹಣದ ಬಾಬ್ತು ಕಟ್ಟಲು ಸಾಧ್ಯವಾಗದೇ ಇರುವುದರಿಂದ 2023ರಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಜಮೀನನ್ನು ಹಿಂಪಡೆದಿದೆ. ಆದರೆ ನಮ್ಮ ಸಮಾಜದ ಇಂದಿನ ಯುವಕರುಗಳು ಶಕ್ತರಾಗಿ ಸಂಘಟಿತರಾಗಿದ್ದೇವೆ. ಆದರೆ ಜಿಲ್ಲಾಧ್ಯಂತ ಇರುವ ನಮ್ಮ ಸಮುದಾಯದ ಬಂಧುಗಳ ಅಭಿವೃದ್ಧಿಗಾಗಿ ಚಟುವಟಿಕೆ ನಡೆಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ನಮ್ಮಿಂದ ವಾಪಸ್ ಪಡೆದಿರುವ ನಿವೇಶನವನ್ನು ನಮ್ಮ ಸಂಘಕ್ಕೆ ವಾಪಸ್ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಉಪ್ಪಳ್ಳಿ ಭರತ್, ಗೌರವಾಧ್ಯಕ್ಷರಾದ ಆಲೂರು ಎನ್ ಸತೀಶ್, ಖಜಾಂಚಿಗಳಾದ ಎಸ್ ಎಂ ಚಂದ್ರಶೇಖರ್, ಗೌರವ ಸಲಹೆಗಾರದ ಶ್ರೀನಿವಾಸ್, ಸಂಚಾಲಕರಾದ ಎಆರ್ ಚಂದ್ರಶೇಖರ್, ಉಪಾಧ್ಯಕ್ಷರಾದ ಸಿ ಮಾಧವ, ಟಿಪಿ ವಿಜಯಕುಮಾರ್, ಟೈಟಾನಿಕ್ ಮಂಜು, ಸಹ ಕಾರ್ಯದರ್ಶಿ ಎಚ್ ಈ ಸಂದೇಶ್, ಕ್ರೀಡ ಕಾರ್ಯದರ್ಶಿ ರತೀಶ್, ಮಹಿಳಾ ಅಧ್ಯಕ್ಷರಾದ ಅಶ್ವಿನಿ ಸಿ, ಗೌರವಾಧ್ಯಕ್ಷರಾದ ಮಂಜುಳಾ ಎಸ್ ಹೆಚ್, ಪ್ರಧಾನ ಕಾರ್ಯದರ್ಶಿ ಶ್ರೀಲಕ್ಷ್ಮಿ ಎಚ್ ಎಸ್, ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.



