ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ ಲೋಕಾಯುಕ್ತರು ಮೆಸ್ಕಾಂ ಇಂಜಿನಿಯರ್ ಒಬ್ಬರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಕಡೂರು ತಾಲ್ಲೂಕು ಮತಿಘಟ್ಟ ಮೆಸ್ಕಾಂ ಕಛೇರಿಯ ಜೂನಿಯರ್ ಇಂಜಿನಿಯರ್ ಹೆಚ್.ಎಂ. ಪ್ರಶಾಂತ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗಂಗಾ ಕಲ್ಯಾಣ ಕುಡಿಯುವ ನೀರು ಸರಬರಾರು ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಗುತ್ತಿಗೆದಾರ ದೇವರಾಜು ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೇವರಾಜು ದೂರು ಸಲ್ಲಿಸಿದ್ದರು. ಶುಕ್ರವಾರ ತಮ್ಮ ಕಛೇರಿಯಲ್ಲಿ ಗುತ್ತಿಗೆದಾರರಿಂದ ರೂ. 9000 ಹಣವನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತರು ಜೂನಿಯರ್ ಇಂಜಿನಿಯರ್ ಪ್ರಶಾಂತ್ ಅವರನ್ನು ರೆಡ್ ಹ್ಯಾಂಡ್ ಆಗಿ ಲಂಚದ ಹಣ ಸಮೇತ ಹಿಡಿದಿದ್ದಾರೆ.



