ಮೂಡಿಗೆರೆ ತಾಲ್ಲೂಕು ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜುಲೈ 11 ಶುಕ್ರವಾರದಂದು ರೈತರಿಗೆ ‘ಪುನರುತ್ಪಾದಕ ಕೃಷಿ, ಮಣ್ಣು ಆರೋಗ್ಯ ನಿರ್ವಹಣೆ, ಜೈವಿಕ ವೈವಿದ್ಯತೆ ಮತ್ತು ಜೇನು ಕೃಷಿ’ ವಿಷಯವಾಗಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ನೆಸ್ಲೆ ಕಂಪನಿ ಅಡಿಯಲ್ಲಿ ಆಯೋಜಿಸಿದ್ದ ರೈತ ತರಬೇತಿ ಕಾರ್ಯಕ್ರಮದಲ್ಲಿ ಜೇನು ಕೃಷಿ ಮತ್ತು ಕಾಫಿ ಕೃಷಿಯ ಬಗ್ಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ದಿವಾಕರ್ ಅವರು ; ಮಲೆನಾಡಿನ ರೈತರು ಅದರಲ್ಲೂ ಅತಿವೃಷ್ಟಿ ಪ್ರದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಕಾಫಿ ಮಂಡಳಿ ಸೇರಿದಂತೆ ಕೃಷಿ ಸಂಶೋಧನಾ ಕೇಂದ್ರಗಳು, ಸರ್ಕಾರ ರೈತರಿಗೆ ಸೂಕ್ತ ಮಾಹಿತಿ ಮತ್ತು ಸೌಲಭ್ಯಗಳನ್ನು ನೀಡುವ ಮೂಲಕ ವೈಜ್ಞಾನಿಕವಾಗಿ ಕೃಷಿ ಮಾಡುವುದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ನೆಸ್ಲೆ ಕಂಪನಿ ರೈತರಿಂದ ಖರೀದಿಸಿದ ಕಾಫಿಗೆ ಉತ್ತೇಜನಕಾರಿಯಾಗಿ ಬೋನಸ್ ಕೊಡುತ್ತಿರುವ ಕ್ರಮವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅನ್ಯುತ ಹಾಸ್ಪಿಟಲ್ ಸಂಸ್ಥಾಪಕರು ಮತ್ತು ಕಾಫಿ ಬೆಳೆಗಾರರು ಆದ ಡಾ.ಎನ್. ರವೀಂದ್ರ ಶೆಟ್ಟಿ ಮಾತನಾಡಿ ; ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೃಷಿಯಲ್ಲಿ ಹಾನಿಕಾರಕ ರಾಸಾಯನಿಕಗಳ ಬಳಕೆ ಬಿಡಬೇಕು. ಪರಿಸರ ಮತ್ತು ಜೀವಿ ಸ್ನೇಹಿಯಾಗಿ ಕೃಷಿ ಮಾಡಬೇಕು. ಭಾರತ ಸರ್ಕಾರದ ಆಯುಷ್ಮಾನ್ ಯೋಜನೆ ಜನರ ಆರೋಗ್ಯ ರಕ್ಷಣೆಗೆ ಒಂದು ಅತ್ಯುತ್ತಮ ಯೋಜನೆಯಾಗಿದೆ. ಈ ಯೋಜನೆ ರೂಪುರೇಷೆ ಮಾಡಲು ನನಗೆ ಅವಕಾಶ ದೊರಕಿದ್ದು ಮತ್ತು ರಾಷ್ಟ್ರಪತಿಗಳ ಜೊತೆಯಲ್ಲಿ ವೇದಿಕೆ ಹಂಚಿಕೊಳ್ಳಲು ಅವಕಾಶ ದೊರಕಿದ್ದು ಮರೆಯಲಾರದ ಕ್ಷಣವಾಗಿದೆ. ಜನರು ಆಯುಷ್ಮಾನ್ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು. ಹಾಗೆಯೇ ಕಣ್ಣಿನ ದೃಷ್ಟಿ ದೋಷ ಇರುವವರಿಗೆ ಉಚಿತವಾದ ಶಸ್ತ್ರಚಿಕಿತ್ಸೆ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿ ಇಮ್ರಾನ್ ಅವರು ಜೇನು ಕೃಷಿಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿ ; ಜೇನು ಸಂತತಿ ನಾಶದಿಂದ ಪರಿಸರ ಮತ್ತು ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಾಫಿ, ಏಲಕ್ಕಿ ಕೃಷಿ ಇಳುವರಿ ಪಡೆಯಲು ಜೇನು ನೋಣಗಳ ಪಾತ್ರ ಪ್ರಮುಖವಾಗಿದೆ. ಪ್ರತಿಯೊಬ್ಬರು ತಮ್ಮ ಜಮೀನಿನಲ್ಲಿ ಜೇನು ಸಾಕಾಣಿಕೆ ಮಾಡುವ ಮೂಲಕ ಆರ್ಥಿಕ ಲಾಭ ಪಡೆಯಬಹುದು ಎಂದರು.
ಕಾಫಿ ಮಂಡಳಿ ತಂತ್ರಜ್ಞ ಮಂಜುನಾಥ್ ಮಾತನಾಡಿ ; ಕಾಫಿ ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಹಾಗೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿಂದ ಉತ್ತಮ ಇಳುವರಿ ಪಡೆಯಬಹುದು. ಮಳೆಗಾಲದಲ್ಲಿ ಮಳೆಬಿಡುವ ನೀಡಿದ ವೇಳೆಯಲ್ಲಿ ಪ್ರತಿ ಎಕರೆಗೆ ಒಂದು ಚೀಲ ಯೂರಿಯದ ಜೊತೆಗೆ ಅರ್ಧ ಚೀಲ ಪೊಟ್ಯಾಷ್ ಗೊಬ್ಬರವನ್ನು ನೀಡಿದರೆ ಮತ್ತು 200 ಲೀಟರ್ ನೀರಿಗೆ 1 ಕೇಜಿ ಮೈಲುತುತ್ತು, 1 ಕೇಜಿ ಸುಣ್ಣ ಮತ್ತು ಅಂಟುದ್ರಾವಣವನ್ನು ಸೇರಿಸಿ ಕಾಫಿಗಿಡಗಳಿಗೆ ಚೆನ್ನಾಗಿ ಸಿಂಪರಣೆ ಮಾಡುವ ಮೂಲಕ ಮತ್ತು ಕೊಳೆರೋಗ ಪೀಡಿತ ಕಾಯಿ ಮತ್ತು ಎಲೆಗಳನ್ನು ಗಿಡದಿಂದ ಬೇರ್ಪಡಿಸಿ ನಾಶಮಾಡುವ ಮೂಲಕ ಕಾಫಿ ಕೊಳೆ ರೋಗದಿಂದ ಆಗುವ ನಷ್ಟವನ್ನು ನಿಯಂತ್ರಣ ಮಾಡಬಹುದು ಎಂದರು.
ನೆಸ್ಲೆ ಕಂಪನಿ ಪ್ರತಿನಿಧಿ ಶಿವಕುಮಾರ್ ಮಾತನಾಡಿ ; ನೆಸ್ಲೆ ಕಂಪನಿಗೆ ಕಾಫಿ ನೀಡುವ ರೈತರಿಗೆ ಪ್ರತಿ ಮೂಟೆಗೆ ಇಷ್ಟು ಎಂದು ಬೋನಸ್ ನೀಡಲಾಗುತ್ತದೆ. ಕಾಫಿ ನೀಡುವ ಪ್ರತಿ ರೈತರ ತೋಟಗಳಿಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ, ರೈತರು ನಮ್ಮ ಕಂಪನಿಯಲ್ಲಿ ಹೆಸರು ನೊಂದಾಯಿಸಿಕೊಂಡು ಕಂಪನಿಯ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗೌಡಹಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಹೆಚ್.ಕೆ. ವೆಂಕಟೇಶ್, ಆಡಳಿತ ಮಂಡಳಿ ಸದಸ್ಯರು, ಸಿಇಓ ಗಣೇಶ್, ಗೌಡಹಳ್ಳಿ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.



