ಮಂತ್ರಾಲಯ ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮೃತ ಯುವಕರೆಲ್ಲರೂ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದ ನಿವಾಸಿಗಳಾಗಿದ್ದು, ಪದವಿ ವ್ಯಾಸಾಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಅಜಿತ್(19), ಸಚಿನ್(20) ಮತ್ತು ಪ್ರಮೋದ್(20) ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಯುವಕರು. ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದಾಗ ಈ ದುರ್ಘಟನೆ ನಡೆದಿದೆ.
ಶನಿವಾರದಂದು ಯುವಕರ ತಂಡ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಂತ್ರಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಸಂಜೆ ನದಿಗೆ ಸ್ನಾನಕ್ಕೆಂದು ಹೋಗಿದ್ದಾಗ ಮೂವರು ಕಣ್ಮರೆ ಆಗಿದ್ದರು. ಕೆಲಹೊತ್ತು ನದಿ ಸುತ್ತ ಹುಡುಕಾಡಲಾಗಿತ್ತು. ಎಷ್ಟೇ ಹುಡುಕಿದರೂ ಸಿಗದ ಹಿನ್ನೆಲೆ ಉಳಿದ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಶನಿವಾರ ತಡರಾತ್ರಿವರೆಗೆ ಹುಡುಕಾಡಿದರೂ ಯುವಕರು ಸುಳಿವು ಸಿಗದ ಕಾರಣ ಭಾನುವಾರ ಬೆಳಿಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಯುವಕರ ಮೃತದೇಹ ನದಿ ತೀರದಲ್ಲಿ ಪತ್ತೆಯಾಗಿವೆ.
ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.



