ರೋಟರಿಯ ಮೂಲ ಉದ್ದೇಶ ಸ್ನೇಹ ಮತ್ತು ಒಡನಾಟದ ಜತೆಗೆ ಸಾಮಾನ್ಯ ಜನರ ಬಳಿ ಹೋಗಬೇಕು. ಇದಕ್ಕೆ ಫಲ್ಸ್ ಪೊಲೀಯೋ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಪಿಎಚ್‍ಎಫ್ ವಸಂತ್ ಹೋಬಳೆಕಾರ್ ಹೇಳಿದರು.
ಅವರು ಸೋಮವಾರ ಸಂಜೆ ಜನ್ನಾಪುರ ವರ್ತಕರ ಭವನದಲ್ಲಿ ಏರ್ಪಡಿಸಿದ್ದ ಗೋಣಿಬೀಡು ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸಕ್ತ ಕಾಲದಲ್ಲಿ ಜನ ಬದಲಾಗಿದ್ದಾರೆ. ನಿಸ್ವಾರ್ಥತೆ ಹೊರಟು ಹೋಗಿದೆ. ಈ ಬಗ್ಗೆ ಜನಜಾಗೃತಿಯಾಗಬೇಕಿದೆ. ತಂತ್ರಜ್ಞಾನ ಮುಂದುವರೆದಿದೆ. ಜನಪರ ಕಾರ್ಯ ಮಾಡುವುದು ಸುಲಭವಿದೆ. ಹಾಗಾಗಿ ನಮ್ಮ ಸಂಸ್ಥೆಗೆ ಯುವಕರನ್ನು ಹೆಚ್ಚಾಗಿ ಕರೆ ತಂದು ಹೊಸ ಹೊಸ ಗುರಿಗಳನ್ನಿಟ್ಟುಕೊಂಡು ಜನರಿಗೆ ಹತ್ತಿರವಾಗಬೇಕೆಂದು ಹೇಳಿದರು.
ಸಹಾಯಕ ಗವರ್ನರ್ ಸಿ.ಎಸ್.ಮಹೇಶ್ ಮಾತನಾಡಿ, ಸಂಸ್ಥೆ ಉತ್ತಮ ಹೆಸರು ಗಳಿಸಬೇಕೆಂದರೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಸಂಚಾರಿ ನಿಯಮ ಪಾಲನೆ, ಪರಿಸರ ಉಳಿವು ಸೇರಿದಂತೆ ಬಡವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ನಿರಂತರವಾಗಿ ರೂಪಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಎಚ್.ಎಸ್.ಪ್ರಸನ್ನ ವಹಿಸಿದ್ದರು.
ಗೋಣಿಬೀಡು ರೋಟರಿ ನೂತನ ಅಧ್ಯಕ್ಷರಾಗಿ ಜೆ.ಸಿ.ಮಹಿಪಾಲ್, ಕಾರ್ಯದರ್ಶಿಯಾಗಿ ಎಂ.ಪಿ.ರಾಮು ಹಾಗೂ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.
ಗೋಣಿಬೀಡು ರೋಟರಿ ನಿಕಟಪೂರ್ವ ಕಾರ್ಯದರ್ಶಿ ರತನ್‍ಕುಮಾರ್, ಜೋನ್ ಲೆಫ್ಟಿನೆಂಟ್ ಎಚ್.ಎ.ಆದರ್ಶ್ ಮತ್ತಿತರರಿದ್ದರು.



