ಅತಿವೃಷ್ಟಿಯಿಂದಾಗಿ ಹವಾಮಾನದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿ ಮಣ್ಣಿನ ತೇವಾಂಶ ಹಾಗೂ ಫಲವತ್ತತೆಯಲ್ಲಿ ಏರುಪೇರಾಗುತ್ತಿರುವುದರಿಂದ ಕಾಫಿ ಬೆಳೆಯಲ್ಲಿ ಇಳುವರಿ ಕಡಿಮೆಯಾಗುತ್ತಿದೆ. ಅದನ್ನು ಸರಿದೂಗಿಸಲು ವಿಜ್ಞಾನಿಗಳ ಸಲಹೆ ಪಡೆದುಕೊಳ್ಳಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ತಿಳಿಸಿದರು.
ಕಾಫಿ ಬೆಳೆಗಾರರ ಒಕ್ಕೂಟ, ಕೃಷಿಕ ಸಮಾಜ ಮತ್ತು ಕೆವಿಕೆಯಿಂದ ಶನಿವಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾಫಿ ಬೆಳೆಯಲ್ಲಿ ಸಸ್ಯಮೂಲ ಸಂವರ್ಧನೆ ಪ್ರಾತ್ಯಕ್ಷಿಕೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಫಿ ಬೆಳೆಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವುದರಿಂದ ಗುಣಮಟ್ಟದ ಫಸಲು ಪಡೆಯಲು ಸಹಕಾರಿಯಾಗುತ್ತದೆ. ಆದರೆ ಬೆಳೆಗಾರರು ಬೆಳೆಯಲ್ಲಿ ಹಿಂದಿನಿಂದಲೂ ಅಳವಡಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಪದ್ಧತಿಯನ್ನು ಮುಂದುವರೆಸಿದ್ದಾರೆ. ಗಿಡವನ್ನು ಕಸಿ ಕಟ್ಟುವ ಮೂಲಕ ವಿನೂತನ ಪದ್ಧತಿ ಅಳವಡಿಸಿಕೊಂಡರೆ ಹೆಚ್ಚು ಇಳುವರಿಯ ಜೊತೆಗೆ ಗುಣಮಟ್ಟದ ಕಾಫಿ ಪಡೆಯಲು ಸಾಧ್ಯವಿದೆ ಎಂಬುದನ್ನು ಕೃಷಿ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಹೊಸ ತಂತ್ರಜ್ಞಾನವನ್ನು ಕಾಫಿ ಬೆಳೆಯಲ್ಲಿ ಬೆಳೆಗಾರರು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಕಾಫಿ ಬೆಳೆಯಲ್ಲಿ ಸಸ್ಯಮೂಲ ಸಂವರ್ಧನೆ ಮಾಡಿಕೊಳ್ಳುವುದರಿಂದ ಗುಣಮಟ್ಟದೊಂದಿಗೆ ಉತ್ತಮ ಇಳುವರಿ ಪಡೆಯಬಹುದು. ಸಸ್ಯಮೂಲ ಸಂವರ್ಧನೆಯನ್ನು ಬೆಳೆಗಾರರು ಸುಲಭವಾದ ವಿಧಾನದಲ್ಲಿ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ರೈತರು ಇದನ್ನು ತಮ್ಮ ತೋಟದ ಕಾಫಿ ಬೆಳೆಯಲ್ಲಿ ಅಳವಡಿಸಿಕೊಳ್ಳಬಹುದು ಇದರ ಬಗ್ಗೆ ಯಾವುದೆ ಮಾಹಿತಿ ಬೇಕಿದ್ದರೂ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್ ಮಾತನಾಡಿ, ರೋಬೆಸ್ಟಾ ಕಾಫಿ ಬೆಲೆ ಇತ್ತೀಚೆಗೆ ಇಳಿಕೆಯಾಗುತ್ತಿರುವುದು ಕಳವಳಕಾರಿಯಾಗಿದೆ. ತೀರಾ ಕೆಳಮಟ್ಟಕ್ಕೆ ಬೆಲೆ ಕುಸಿದರೆ ದುಬಾರಿ ವೆಚ್ಚ ತಗಲುವ ತೋಟದ ನಿರ್ವಹಣೆಯನ್ನು ಬೆಳೆಗಾರರು ಸರಿದೂಗಿಸಲು ಕಷ್ಟವಾಗುತ್ತದೆ. ಇಳುವರಿ ಹೆಚ್ಚಳಕ್ಕೆ ಪ್ರತಿಯೊಬ್ಬ ಬೆಳಗಾರರು ಮುಂದಾಗಬೇಕು. ಗುಣಮಟ್ಟದ ಕಾಫಿಗೆ ಎಲ್ಲಾ ಕಾಲದಲ್ಲೂ ಬೇಡಿಕೆ ಇರುವುದರಿಂದ ಕಾಫಿಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗಾದರೆ ಮಾತ್ರ ಬೆಳೆಗಾರರು ಚೇತರಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಶ್ರೀನಿವಾಸ್, ಕೆಜಿಎಫ್ ಅಧ್ಯಕ್ಷ ಹೆಚ್.ಬಿ.ಶಿವಣ್ಣ, ಬೆಳೆಗಾರರ ಸಂಘದ ಮೂಡಿಗೆರೆ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಾಫಿ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಪೂರ್ಣೇಶ್ ಜಿ, ಹೊಸಳ್ಳಿ ಇತರರಿದ್ದರು.



