ಮೂಡಿಗೆರೆ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಬೇಡಿಕೆಯಿದೆ ಜಾಗ ಗುರುತಿಸಿ ಫಲಾನುಭವಿಗಳಿಗೆ ನಿವೇಶನ ನೀಡಬೇಕು. ಸ್ಮಶಾನ, ಗೋಮಾಳ ಜಾಗ, ಆಟದ ಮೈದಾನಗಳನ್ನು ಸರ್ವೆ ಮಾಡಿ ಪಕ್ಕಪೋಡಿ ಮಾಡಬೇಕು. ವಸತಿ ಪ್ರದೇಶ ಮತ್ತು ನಿವೇಶನಗಳಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕು. ವಿವಿಧ ಕಡೆ ರಸ್ತೆಗಳನ್ನು ಹಾಗೂ ಸರ್ಕಾರಿ ಕೆರೆಗಳನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ ಅದನ್ನು ಖುಲ್ಲಾಗೊಳಿಸಬೇಕು. ತಡೆಗೋಡೆ ನಿರ್ಮಿಸಬೇಕು ಎಂದು ಹಂಗರ್ ಪ್ರಾಜೆಕ್ಟ್ ಮತ್ತು ಸುಗ್ರಾಮ ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳು ತಹಸೀಲ್ದಾರ್ ರಾಜಶೇಖರ ಮೂರ್ತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಹಳೆಮೂಡಿಗೆರೆ ಗ್ರಾಮದ ಸ.ನಂ 7ರಲ್ಲಿ 3.34 ಎಕರೆ ಜಾಗವನ್ನು ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಅಲ್ಲಿಗೆ ರಸ್ತೆ ಇಲ್ಲದ ಕಾರಣ ಹೊಸದಾಗಿ ಜಾಗ ಗುರುತಿಸಿ ರಸ್ತೆ ನಿರ್ಮಿಸಬೇಕು. ಬಾಳೂರು ಎಸ್ಟೇಟ್ ಗ್ರಾಮದ ಸ.ನಂ 230ರಲ್ಲಿ 2 ಎಕರೆ ಜಾಗ ನಿವೇಶನಕ್ಕೆ ಮಂಜೂರಾಗಿದೆ. ಪಕ್ಕಾಪೋಡಿ ಮಾಡಬೇಕು. ಹೆಸಗಲ್ ಗ್ರಾಮದ ಸ.ನಂ 71 ರಲ್ಲಿ 1.14 ಎಕರೆ, ಸ.ನಂ 78 ರಲ್ಲಿ 1.37 ಎಕರೆ, ಸ.ನಂ 19 ರಲ್ಲಿ 4.27 ಎಕರೆ ಜಾಗದಲ್ಲಿ ಸರ್ಕಾರಿ ಕೆರೆಗಳಿವೆ ಅದನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ ಅದನ್ನು ಖುಲ್ಲಾಗೊಳಿಸಬೇಕು. ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿ 26 ಕಡೆ ಭೂಕುಸಿತ ಉಂಟಾಗಿದೆ ಅಲ್ಲಿಗೆ ತಡೆಗೋಡೆ ನಿರ್ಮಿಸಬೇಕು. ಹೆಸಗಲ್ ಸ.ನಂ 71 ರಲ್ಲಿ ಉರ್ದು ಶಾಲೆಗೆಂದು ದಾನಿಯೊಬ್ಬರು ನೀಡಿದ ಜಾಗವನ್ನು ಸರ್ವೆ ನಡೆಸಿ ಹದ್ದುಬಸ್ತು ಮಾಡಬೇಕು. ಹೆಸಗಲ್ ಸ.ನಂ 3 ಮತ್ತು 4 ರಲ್ಲಿ 34 ಗುಂಟೆ ಜಾಗದಲ್ಲಿ 60 ಮನೆಯಿದೆ. ಅಲ್ಲಿನ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ಹೆಸಗಲ್ ಗ್ರಾಮದ ವಿವೇಕಾನಂದ ನಗರದ ಆಟದ ಮೈದಾನ ಮತ್ತು ಸ್ಮಶಾನ ಜಾಗವನ್ನು ಹದ್ದುಬಸ್ತು ಮಾಡಬೇಕು. ಚಿನ್ನಿಗ ಗ್ರಾಪಂ ವ್ಯಾಪ್ತಿಯ ಹೊಯ್ಸಳಲು, ವಾಟಳ್ಳಿ ರಸ್ತೆ ದುರಸ್ತಿ ಪಡಿಸಬೇಕು. ಕಿರುಗುಂದ ಗ್ರಾಪಂ ವ್ಯಾಪ್ತಿಯ ಹೆಗ್ಗರವಳ್ಳಿ ಗ್ರಾಮದ ಸ.ನಂ 49ರ ಗೋಮಾಳ ಜಾಗವನ್ನು ಗ್ರಾಪಂನಿಂದ ನಿವೇಶನವನ್ನಾಗಿ ಮಾಡಿ 40 ಮಂದಿ ಫಲಾನುಭವಿಗಳಿಗೆ ಹಂಚಲಾಗಿದೆ. ಆ ಜಾಗದ ಪಹಣಿಯಲ್ಲಿ ಈಗ ಹೊಸದಾಗಿ ಡೀಮ್ಡ್ ಫಾರೆಸ್ಟ್ ಎಂದು ನಮೂದಾಗಿದೆ. ಅದನ್ನು ಸರಿಪಡಿಸಬೇಕು. ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಜಿ.ಅಗ್ರಹಾರ ಗ್ರಾಮದ ಸ.ನಂ 67 ರಲ್ಲಿ ನಿವೇಶನ ಹಾಗೂ ಸ.ನಂ 65 ರಲ್ಲಿರುವ ಖಾಲಿ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಬೇಕು. ತರುವೆ, ಅತ್ತಿಗೆರೆ, ಬಿನ್ನಡಿ ಗ್ರಾಮಗಳಲ್ಲಿರುವ ಸ್ಮಶಾನ ಜಾಗವನ್ನು ಹದ್ದುಬಸ್ತು ಮಾಡಬೇಕು. ತರುವೆ ಗ್ರಾಮದಲ್ಲಿರುವ 4 ಕೆರೆಗಳ ಗಡಿ ಗುರುತಿಸಬೇಕು. ಬಿದರಹಳ್ಳಿ ಗ್ರಾಮದಲ್ಲಿರುವ ಸ್ಮಶಾನ ಜಾಗದ ದಾಖಲಾತಿ ಒದಗಿಸಬೇಕು. ಕೆಂಜಿಗೆ ಗ್ರಾಮದಲ್ಲಿ ವಾಸವಾಗಿರುವ ಕುಟುಂಬದವರಿಗೆ 94 ಸಿಯಲ್ಲಿ ಹಕ್ಕು ಪತ್ರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಬಳಿಕ ತಹಸಿಲ್ದಾರ್ ರಾಜಶೇಖರ್ ಮೂರ್ತಿ ಮಾತನಾಡಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸಮಸ್ಯೆಗಳಿಗೆ ಶೀಘ್ರದಲ್ಲಿ ಮುಕ್ತಿ ದೊರಕಿಸಲಾಗುವುದು. ಸ್ಮಶಾನಭೂಮಿ, ಗೋಮಾಳ ಜಾಗ, ಆಟದ ಮೈದಾನ ಇವೆಲ್ಲವನ್ನು ಗುರುತಿಸಿ ಸರ್ವೆ ನಡೆಸಿ ಪಕ್ಕಾಪೋಡಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಕೆರೆ, ರಸ್ತೆ ನಿವೇಶನ ಜಾಗದ ಒತ್ತುವರಿ ಖುಲ್ಲಾಗೊಳಿಸಲಾಗುವುದು. ಬಡಾವಣೆಗಳಿಗೆ ಮತ್ತು ಹೊಸ ನಿವೇಶನಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗುವುದು. ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. 94ಸಿ ಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಇನ್ನುಳಿದ ಅರ್ಜಿಗಳ ಪರಿಶೀಲನೆ ನಡೆಸಿ ಹಕ್ಕು ಪತ್ರಗಳನ್ನು ನೀಡಲಾಗುವುದು. ಭೂಕುಸಿತ ಉಂಟಾದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ಅರ್ಜಿ ಬಂದಿರುವ ಸ್ಥಳದ ಹದ್ದುಬಸ್ತು ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಗ್ರಾಮ ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಅಧ್ಯಕ್ಷೆ ಸಿ.ಎನ್.ರಾಧ, ಹಳೆಮೂಡಿಗೆರೆ ಗ್ರಾಪಂ ಅಧ್ಯಕ್ಷೆ ಡಿ.ರಂಜಿತಾ, ಹೆಸ್ಗಲ್ ಗ್ರಾಪಂ ಅಧ್ಯಕ್ಷೆ ನಜ್ಮಾ ಬೇಗಂ, ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ, ತರುವೆ ಗ್ರಾಪಂ ಅಧ್ಯಕ್ಷೆ ಸುಶೀಲ, ಬಾಳೂರು ಗ್ರಾಪಂ ಉಪಾಧ್ಯಕ್ಷೆ ಕೆ.ಆರ್.ಗೀತಾ, ವಿವಿಧ ಗ್ರಾಪಂ ಸದಸ್ಯರಾದ ಅಂಬಿಕಾ, ಜ್ಯೋತಿ ಸಾಲ್ದಾನ, ಸುನಿತಾ, ಸೋನಿಯಾ ಕ್ರಾಸ್ತ, ಕೋಮಲ, ಭಾಗ್ಯ, ಜಯಲಕ್ಷ್ಮಿ, ಸುಗ್ರಾಮ, ಹಂಗರ್ ಪ್ರಾಜೆಕ್ಟ್ ಸಂಯೋಜಕ ನವೀನ್ ಕುಮಾರ್ ಇತರರಿದ್ದರು.



