Screenshot_20250731-172838_2

 

 

ಪರೋಮೋಚ್ಛ ತಾತ್ವಿಕ ಗ್ರಂಥ ಸಿದ್ಧಾಂತ ಶಿಖಾಮಣಿ. ಸಮಸ್ತ ಜೀವಿಗಳ ಸಾರ್ಥಕ ಬದುಕಿನ ಬೋಧನೆಯನ್ನೊಳಗೊಂಡಿದೆ ಎಂದು ಸಾಹಿತಿ ಚಿಂತಕ, ವಾಗ್ಮಿ, ವಚನಕಾರ ಚಟ್ನಳ್ಳಿಮಹೇಶ್ ನುಡಿದರು.

ಚಿಕ್ಕಮಗಳೂರು ನಗರದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗದೊಂದಿಗೆ ಜುಲೈ26 ರಿಂದ ಆಗಸ್ಟ್24ರ ವರೆಗೆ ಆಯೋಜಿಸಿರುವ ‘ಅಂಗಳದೆಡೆಗೆ ಮಂಗಳ ನುಡಿ-ನಡಿಗೆ’ ‘ಶ್ರಾವಣಮಾಸದ ಪ್ರವಚನ ಮಾಲಿಕೆ’ಯ ಅಂಗವಾಗಿ “ಸಿದ್ಧಾಂತ ಶಿಖಾಮಣಿ” ಕುರಿತಂತೆ ನಿನ್ನೆ ಸಂಜೆ ಅವರು ಉಪನ್ಯಾಸ ನೀಡಿ ಸಂವಾದಿಸಿದರು.

ಒಳ್ಳೆಯ ವಿಚಾರಗಳು ಆಲೋಚನೆಗಳು ತೆರೆದ ಮನಸ್ಸಿನಿಂದ ಸ್ವೀಕರಿಸುವ ಪದ್ಧತಿ ಹಿಂದಿನಿಂದಲೂ ನಮ್ಮಲ್ಲಿ ಬಂದಿದೆ. ಸಮಾಜಕಟ್ಟುವ ಸಾಹಿತ್ಯಶಕ್ತಿಯ ಧಾರ್ಮಿಕ ನಾಯಕತ್ವದ ಹುಟ್ಟು ಮತ್ತು ಮೂಲವನ್ನು ಕೆಣಕದೆ ಸದ್ವಿಚಾರಗಳನ್ನು ಗ್ರಹಿಸಿ ಅಳವಡಿಸಿಕೊಳ್ಳುವುದು ಸಮಾಜದ ಪ್ರಸ್ತುತ ಸನ್ನಿವೇಶ ಎಂದರು.

“ವೃತ್ತಿಶ್ಚೈತನ್ಯ ರೂಪಿಣೀ” ಎಂಬ ಸಿದ್ಧಾಂತ ಶಿಖಾಮಣಿಯ ಪ್ರಮುಖ ಮಾತು ಅರ್ಥವತ್ತಾಗಿದೆ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ತತ್ತ್ವಕ್ಕೆ ಹೋಲಿಕೆಯಾಗುತ್ತದೆ. ಕಳಾಚೈತನ್ಯ ಎಂದರೆ ಕಾಯಕವನ್ನು ಜಗತ್ತಿನ-ಬದುಕಿನ ಚೈತನ್ಯವೆಂದು ಬಣ್ಣಿಸಿರುವುದು ಗಮನೀಯ ಎಂದ ಚಟ್ನಳ್ಳಿಮಹೇಶ್, ಶಕ್ತಿ ಸಮನ್ವಿತ ಸರ್ವಶಕ್ತ ಶಿವನೆಂಬುದನ್ನು ಪ್ರತಿಪಾದಿಸಿದೆ. ಸಮಸ್ತ ಲೋಕ ನಿರ್ಮಾಣ ಸಮವಾಯ ಸ್ವರೂಪಿಣೀ ಎಂದಿದೆ. ಷಟ್‍ಸ್ಥಲ ಸಿದ್ಧಾಂತ ಪ್ರತಿಪಾದನೆ ಗಮನೀಯವಾಗಿ ಕಾಣಬಹುದು ಎಂದರು.

ಶ್ರೀಶಿವಯೋಗಿ ಶಿವಾಚಾರ್ಯರು ರಚಿಸಿದ ಸಿದ್ಧಾಂತ ಶಿಖಾಮಣಿ ಸಂಸ್ಕøತದಲ್ಲಿ ಸಾಹಿತ್ಯಿಕ ಅಂಶಗಳನ್ನೂಳಗೊಂಡ ಕ್ಲಿಷ್ಟ ಮಾತುಗಳ ಸಂಗ್ರಹ ಕಾಣಬಹುದು. ಕಬ್ಬಿಣದ ಕಡಲೆಯಂತಿರುವ ಸಿದ್ಧಾಂತ ಶಿಖಾಮಣಿಯ ಸಾರಸತ್ವವನ್ನು ಡಾ.ಜಚನಿ ಮತ್ತು ಸಿದ್ದೇಶ್ವರಸ್ವಾಮಿಗಳು ಸರಳ ಸುಂದರವಾಗಿ ಚಿತ್ರೀಸಿದ್ದಾರೆ. ಬಹುತೇಕ ಎಲ್ಲ ಧರ್ಮ ಗ್ರಂಥಗಳಲ್ಲಿರುವಂತಹ ಜೀವಪರ-ಲೋಕಹಿತ ಅಂಶಗಳೆ ಇದರಲ್ಲೂ ಪ್ರಧಾನವಾಗಿದೆ. 12ನೆಯ ಶತಮಾನದ ವಚನಸಾಹಿತ್ಯ ಸರಳ ಮಾತುಗಳಲ್ಲಿ ಹೆಚ್ಚಾಗಿರುವುದರಿಂದ ಬೇಗ ಜನಮನಕ್ಕೆ ತಟ್ಟುತ್ತದೆ. ಅಲ್ಲಮಪ್ರಭು, ಚನ್ನಬಸವಣ್ಣ ಸೇರಿದಂತೆ ಹಲವು ವಚನಕಾರರ ಕೆಲ ವಚನಗಳು ನಮ್ಮ ವಿಶ್ಲೇಷಣೆಗೆ ನಿಲುಕಲಾರವು ಎಂಬುದೂ ಸತ್ಯ ಎಂದ ಚಟ್ನಳ್ಳಿಮಹೇಶ್, ಸಾರ್ವಕಾಲೀಕ ಸತ್ಯ ಮತ್ತು ಸತ್ವದ ಪ್ರತಿಪಾದನೆ ಇಂದಿನ ಅಗತ್ಯ ಎಂದು ನುಡಿದರು.

ವೇದಾಗಮ, ಷಟ್‍ಸ್ಥಲ, ಜೀವೇಶ್ವರ ಯೋಗಪದ್ಮ ತರಣಿ, ಗೋಪ್ಯಚಿಂತಾಮಣಿ ಮತ್ತು ಭುಕ್ತಿ, ಮುಕ್ತಿ ಪ್ರಧಾಯಿನಿ ಎಂಬ ಸಿದ್ಧಾಂತ ಶಿಖಾಮಣಿಯ ಅರ್ಥವತ್ತಾದ ಮಾತುಗಳನ್ನು ಉಲ್ಲೇಖಿಸಿದ ಅವರು, ಆದಿ ಜಗದ್ಗುರು ರೇಣುಕರ ಅನುಭಾವಿಕ ಸೈದ್ಧಾಂತಿಕ ವಾಣಿ. ಬದುಕಿ ಬೆಳಕಿಗೆ ಬರುವ ವಾಣಿ ಎಂದು ಬಣ್ಣಿಸಿದರು.

ಜೀವ ಶಿವನಾಗುವ, ಮಾನವ ಮಹಾದೇವನಾಗುವ ಪ್ರಕ್ರಿಯೆಯಲ್ಲಿ ನಾವು ನಿರ್ವಹಿಸಬೇಕಾದ ಸಿದ್ಧಸೂತ್ರಗಳ ಒಟ್ಟು ಮೊತ್ತವೇ ಸಿದ್ಧಾಂತ ಶಿಖಾಮಣಿ. 21ಪರಿಚ್ಛೇದ 1,400ಶ್ಲೋಕಗಳಲ್ಲಿ ವಿಸ್ತøತವಾಗಿದೆ. ಸಾಕ್ಷಾತ್ ಪರಶಿವನೇ ಪಾರ್ವತಿಗೆ ಇದನ್ನು ಮೊದಲು ಬೋಧಿಸಿದ. ನಂತರ ಗಣಕೂಟಕ್ಕೆ ಬೋಧಿಸಲ್ಪಟಿತ್ತು. ತದನಂತರ ಗಣಕೂಟದ ಮುಖ್ಯಸ್ಥ ಆದಿರೇಣುಕರಾಗಿ ಭೂಲೋಕಕ್ಕೆ ಕಳುಹಿಸಲ್ಪಟ್ಟಿದ್ದು ಅವರು ಅಗಸ್ತ್ಯರಿಗೆ ಬೋಧಿಸಿದರೆಂಬ ವಿಷಯ ಗ್ರಂಥದಲ್ಲಿ ಹೇಳಲ್ಪಟ್ಟಿದೆ. ಸಾತ್ವಿಕತೆ, ಜನಮುಖಿ ಚಿಂತನೆಯಿಂದ ಬದುಕಿಗೆ ಹೊಸ ಆಯಾಮ, ಸ್ಪೂರ್ತಿ ತಿರುವು ಕೊಡುವ ಮಹಾಗ್ರಂಥವಿದೆಂದರು.

ಸಿದ್ಧಾಂತ ಶಿಖಾಮಣಿಯ 2ನೆಯ ಪರಿಚ್ಛೇದಲ್ಲಿ ಲಿಂಗತತ್ತ್ವವನ್ನು ವ್ಯಾಪಕವಾಗಿ ಹೇಳಲಾಗಿದೆ. ವೇದ, ಉಪನಿಷತ್ತು ಆಗಮ ಪುರಾಣಾದಿಯಲ್ಲಿ ನಿರೂಪಿತವಾದ ಸಿದ್ಧಾಂತತತ್ತ್ವವನ್ನು 101 ಸ್ಥಲಗಳ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿ ನಿರೂಪಿಸಲಾಗಿದೆ. ಇದರ ಅನೇಕ ಶ್ಲೋಕಗಳ ಅರ್ಥವನ್ನು ಶರಣರು ತಮ್ಮ ಜೀವತತ್ತ್ವಗಳಲ್ಲಿ ಸರಳ ಸುಂದರವಾಗಿ ಹೇಳಿದ್ದಾರೆಂದ ಚಟ್ನಳ್ಳಿಮಹೇಶ್, ವಿಭೂತಿ ಧರಿಸಿ, ಇಷ್ಟಲಿಂಗವನ್ನು ಕರದಲ್ಲಿ ಹಿಡಿದು ಭಕ್ತಿ ಶ್ರದ್ಧೆಯಿಂದ ಧ್ಯಾನ, ಪೂಜೆ ಮಾಡುವವರೆಲ್ಲರೂ ವೀರಶೈವ ಎಂದಿದೆ. ಇದರಲ್ಲಿ ಜಾತಿಮತ ಬೇಧವಿಲ್ಲದೆ ಲಿಂಗತತ್ತ್ವವನ್ನು ಉದಾತ್ತವಾಗಿ ಸಾರಲಾಗಿದೆ ಎಂದು ಬಣ್ಣಿಸಿದರು.

ಬೆಂಗಳೂರಿನ ಶ್ರೀಜಗದ್ಗುರು ರೇಣುಕಾಚಾರ್ಯ ಶಿಕ್ಷಣಸಂಸ್ಥೆಯ ಅಧ್ಯಕ್ಷ ಯು.ಎಂ.ಬಸವರಾಜು ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಪ್ರಾಯೋಜಕ ಪ್ರಭುಲಿಂಗಶಾಸ್ತ್ರಿ ಅವರನ್ನು ಗೌರವಿಸಿ ಮಾತನಾಡಿದರು. ಶ್ರೀದೇವಿ ಗುರುಕುಲ ಹಾಗೂ ಶ್ರೀಪಾರ್ವತಿ ಮಹಿಳಾಮಂಡಳಿ ತಂಡ ಆಚಾರ್ಯಗೀತೆಗಳನ್ನು ಪ್ರಸ್ತುತಪಡಿಸಿತು. ಬೇಲೂರಿನ ಗಾಯಕ ಚಂದನರ ಶ್ರಾವಣಗೀತೆ ಗಮನಸೆಳೆಯಿತು.

ಶ್ರೀ ದೇವಿಗುರುಕುಲದ ಅಧ್ಯಕ್ಷ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತ್ರಿಗಳು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಿದ್ಧಾಂತ ಶಿಖಾಮಣಿ ಕೇವಲ ವೀರಶೈವರಿಗೆ ಮಾತ್ರವಲ್ಲದೆ ಸಮಸ್ತ ಜೀವಲೋಕಕ್ಕೆ ಕಲ್ಯಾಣವನ್ನು ಬಯಸುವ ಮಹತ್ವದ ಸದ್‍ಗ್ರಂಥ. ಇದರ ಅಂಶಗಳನ್ನು ಅರಿತು ಆಚರಿಸಿದರೆ ಬದುಕು ಹಸನಾಗುವುದೆಂದರು.

ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ವಂದಿಸಿದರು. ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಎಚ್.ಎಸ್.ಪುಟ್ಟೇಗೌಡ ನಿರೂಪಿಸಿದ್ದು, ಶೈಲಾಬಸವರಾಜ್ ತಂಡ ಪ್ರಾರ್ಥಿಸಿದರು. ಪುಷ್ಪಾಕುಮಾರಸ್ವಾಮಿ ಮತ್ತು ರೇಖಾಪ್ರಸನ್ನ ವೇದಘೋಷ ಮಾಡಿದರು. ನಿವೃತ್ತ ಪ್ರಾಂಶುಪಾಲೆ ದೇವಿಕಾ ಷಡಕ್ಷರಿಸ್ವಾಮಿ ಮತ್ತು ಉಪನ್ಯಾಸಕ ಆರ್.ಚಂದ್ರಶೇಖರ್ ಸಂವಾದಿಸಿದರು.

ಎಸ್‍ಟಿಜೆ ಪ್ರಾಂಶುಪಾಲೆ ಪ್ರೊ.ಭಾರತಿ, ವಿಶ್ರಾಂತ ಪ್ರಾಂಶುಪಾಲ ನಾಗೇಶ್‍ಕಡೂರು, ವಕೀಲ ಜಗದೀಶ್, ಪ್ರೇಮಾಸದಾನಂದ, ವಿವೇಕ ಜಾಗೃತಬಳಗದ ಗೌರವಾಧ್ಯಕ್ಷ ನಂಜುಂಡಪ್ಪ, ಅಕ್ಕಮಹಾದೇವಿ ಸಂಘದ ಕಾರ್ಯದರ್ಶಿ ಆಶಾಹೇಮಂತ್, ಡಾ.ಗೌರಿವರುಣ್, ಎಐಟಿ ಉಪನ್ಯಾಸಕ ಡಾ.ಗೌತಮ್, ಎ.ಜಿ.ವಿಶ್ವಮೂರ್ತಿ, ಕಲ್ಯಾಣನಗರ ಸಾಹಿತ್ಯವೇದಿಕೆ ಅಧ್ಯಕ್ಷ ಲೋಕೇಶ್ವಪ್ಪ, ಸಖರಾಯಪಟ್ಟಣ ಮಲ್ಲೇಶಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ವರದಿ : ಪ್ರಭುಲಿಂಗಶಾಸ್ತ್ರಿ 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ