sthanya pana

 

 

ತಾಯಿ ಹಾಲು ಅದರ ಮಹತ್ವ ಮಗುವಿನ ಮೇಲಾಗುವ ಪ್ರಯೋಜನದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಆಗಸ್ಟ್ ಮೊದಲ ವಾರದಲ್ಲಿ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾಸ್ಪತ್ರೆ, ಹಾಗೂ ಇನ್ನರ್ ವೀಲ್ಹ್ ಕ್ಲಬ್, ರೋಟರಿ ಕ್ಲಬ್, ರೋಟರಿ ಕಾಫಿ ಲ್ಯಾಂಡ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಸ್ತನ್ಯಪಾನ ಸಪ್ತಾಹ’ 2025 ನ್ನು ಉದ್ಘಾಟಿಸಿ ಮಾತನಾಡಿದರು.

ಸ್ತನ್ಯಪಾನದಿಂದ ಯಾವ ಯಾವ ರೋಗಗಳನ್ನು ತಡೆಯಬಹುದು ಹಾಗೂ ಅದರ ಅನುಕೂಲತೆಗಳ ಬಗ್ಗೆ ಈ ಸಪ್ತಾಹದ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸಲಾಗುವುದೆಂದು ಹೇಳಿ ಆರೋಗ್ಯ ಇಲಾಖೆಯಿಂದ ಆಯೋಜಿಸುವ ವಿವಿಧ ಆರೋಗ್ಯ ಅರಿವು ಕಾರ್ಯಕ್ರಮಗಳಲ್ಲಿ ಇನ್ನರ್ ವೀಲ್ಹ್ ಕ್ಲಬ್, ರೋಟರಿ ಕ್ಲಬ್, ಲಯನ್ ಸಂಸ್ಥೆ ಸಕ್ರಿಯವಾಗಿ ಪಾಲ್ಗೊಂಡು ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಗು ಜನಿಸಿದ 6 ತಿಂಗಳು ತಪ್ಪದೇ ಸ್ತನ್ಯಪಾನ ಕಡ್ಡಾಯವಾಗಿ ನೀಡಬೇಕು ಎಂಬುದನ್ನು ತಾಯಂದಿರಲ್ಲಿ ಸಪ್ತಾಹದ ಮೂಲಕ ಅರಿವು ಮೂಡಿಸುವ ಅಗತ್ಯ ಇದೆ ಎಂದರು.

ಇದನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆ ಪ್ರತೀ ವರ್ಷ ಈ ಬಗ್ಗೆ ಅರಿವು ಮೂಡಿಸಲು ಸ್ತನ್ಯಪಾನ ಸಪ್ತಾಹವನ್ನು ಆಚರಿಸುತ್ತಿದೆ. 2025 ರಲ್ಲಿ ‘ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ’ ಎಂಬ ಘೋಷವಾಕ್ಯದೊಂದಿಗೆ ಶೇ.50 ರಷ್ಟು ಗುರಿ ತಲುಪಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸ್ತನ್ಯಪಾನದಿಂದ ತಾಯಿ ಮತ್ತು ಮಗು ಇಬ್ಬರಿಗೂ ಪ್ರಯೋಜನವಿದೆ. ಚುಚ್ಚುಮದ್ದು ಕೊಡುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಲು ಅವಕಾಶವಿರುವಂತೆ ಮಗುವಿಗೆ ರೋಗಗಳು ಬರದಂತೆ ತಡೆಯುವ ಶಕ್ತಿ ಸ್ತನ್ಯಪಾನಕ್ಕಿದೆ ಎಂದು ಹೇಳಿದರು.

ಮಗು ಜನಿಸಿದ ಮೊದಲ ತಿಂಗಳಲ್ಲೇ ಮೃತಪಡುವುದು ಮತ್ತು ರೋಗಗಳಿಗೆ ತುತ್ತಾಗುವುದನ್ನು ತಡೆಯಲು ಸ್ತನ್ಯಪಾನದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ತಾಯಂದಿರು ಮಗು ಹಾರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಸ್ತನ್ಯಪಾನ ಮಾಡುವುದರಿಂದ ಮಹಿಳೆಯರ ಸೌಂದರ್ಯ ಹಾಳಾಗುತ್ತದೆಂಬ ಮೂಡನಂಬಿಕೆಯಿಂದ ಹೊರತರುವ ಕೆಲಸವನ್ನು ಈ ಸಪ್ತಾಹದ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಮಗು ಜನಿಸಿದ 6 ತಿಂಗಳವರೆಗೆ ಕಡ್ಡಾಯವಾಗಿ ಎದೆಹಾಲನ್ನು ನೀಡಿದರೆ ವಾಂತಿಭೇದಿ, ನ್ಯುಮೋನಿಯಾ ಮುಂತಾದವುಗಳಿಗೆ ತುತ್ತಾಗುವುದನ್ನು ತಡೆಯಬಹುದಾಗಿದೆ. ತಾಯಂದಿರಿಗೆ ಹಾಲುಣಿಸುವ ಬಗ್ಗೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ಮನವರಿಕೆ ಮಾಡುತ್ತಿದ್ದಾರೆಂದು ಹೇಳಿದರು.

ಜಿಲ್ಲೆಯಲ್ಲಿ 2024-25 ರಲ್ಲಿ 12302 ಮಕ್ಕಳು ಜನಿಸಿದ್ದು, ಇದರಲ್ಲಿ 83 ಮಕ್ಕಳು ಮೊದಲ ಹುಟ್ಟುಹಬ್ಬವನ್ನೇ ನೋಡಿಲ್ಲ. ಕಾರಣ ಸ್ತನ್ಯಪಾನದಿಂದ ವಂಚಿತರಾಗಿ 18 ಮಕ್ಕಳು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಾ. ಭಾರತಿ, ಡಾ. ಶಶಿಕಲಾ, ಶಿವರಾಜ್, ಸ್ತ್ರೀರೋಗ ತಜ್ಞ ಡಾ. ಪುಟ್ಟಪ್ಪ, ಮಕ್ಕಳ ತಜ್ಞರಾದ ಡಾ. ವರದಾ ವಿದ್ಯಾರಾಣಿ, ಡಾ. ಕಲ್ಪನ, ಇನ್ನರ್ ವೀಲ್ಹ್ ಕ್ಲಬ್, ನಯನ ಸಂತೋಷ್, ಶಾಲಿನ ನಾಗೇಶ್, ನಾಗೇಶ್ ಕೆಂಜಿಗೆ, ಮತ್ತಿತರರು ಉಪಸ್ಥಿತರಿದ್ದರು.ಮೊದಲಿಗೆ ಡಿ.ಎನ್.ಓ ರೇಣುಕ ಸ್ವಾಗತಿಸಿ, ಜಲಜಾಕ್ಷಿ ನಿರೂಪಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ