ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸಲು ಸಹಕಾರಿ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಈ ಸಂಸ್ಥೆಗಳು ಹೆಚ್ಚಿನ ಶ್ರಮ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಹೇಳಿದರು.
ಅವರು ಮಂಗಳವಾರ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆ (NCDC) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಹಕಾರ ಸಂಘ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಬಹಳಷ್ಟು ಅನುದಾನವನ್ನು ನೀಡುತ್ತಿವೆ. ಹಾಗೆಯೇ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಸಹ ರೈತರಿಗೆ ಪೂರಕವಾದ ಕಾರ್ಯಕ್ರಮ ನೀಡುತ್ತಿವೆ. ಈ ಅನುದಾನವನ್ನು ಗ್ರಾಮೀಣ ಪ್ರದೇಶದ ರೈತರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ತರಬೇತಿ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಸಹಕಾರ ಸಂಘಗಳ ಚಿಕ್ಕಮಗಳೂರು ಜಿಲ್ಲಾ ಉಪನಿಬಂಧಕರಾದ ಶ್ರೀಮತಿ ಡಿ. ತೇಜಸ್ವಿನಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ; ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆಗಳು ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿದೆ. ಯಾವುದೇ ಯೋಜನೆಗಳನ್ನು ರೂಪಿಸಿದರು ಅವು ಆಯಾ ಪ್ರಾದೇಶಿಕ ಅವಶ್ಯಕತೆಗೆ ಅನುಗುಣವಾಗಿರಬೇಕು ಮತ್ತು ಪ್ರಾಯೋಗಿಕವಾಗಿ ಅನುಷ್ಟಾನಕ್ಕೆ ತರುವಂತವುಗಳಾಗಿರಬೇಕು. ಯಾವುದೇ ವಿಚಾರದ ಬಗ್ಗೆ ನೀಡುವ ತರಬೇತಿಗಳು ಸರಳವಾಗಿರಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ತನಿಶಾ ಲಾಲ್ ಅವರು ಮಾತನಾಡಿ ರೈತರ ಆರ್ಥಿಕ ಸಬಲೀಕರಣದಲ್ಲಿ ಸಹಕಾರ ಸಂಸ್ಥೆಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಸಹಕಾರ ಸಂಸ‍್ಥೆಗಳ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರ ಏಳಿಗೆಗೆ ಶ್ರಮಿಸಬೇಕು ಎಂದರು.
ಮೂಡಿಗೆರೆ ಕೃಷಿ ವಿಜ್ಞಾನ ಕೇಂಧ್ರ ಮುಖ್ಯಸ್ಥರಾದ ಡಾ. ಎ.ಟಿ. ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಮಹಾವಿದ್ಯಾಲಯದ ಅಸೋಷಿಯೇಟ್ ಡೈರೆಕ್ಟರ್ ಡಾ. ಶಿವಪ್ರಸಾದ್, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆ ಸಹಾಯಕ ನಿರ್ದೇಶಕ ಹರಿಪ್ರಸಾದ್, ಸಹಕಾರ ಸಂಘಗಳ ಚಿಕ್ಕಮಗಳೂರು ಜಿಲ್ಲಾ ಸಹಾಯಕ ನಿಬಂಧಕರಾದ ದಯಾನಂದ, ಮೂಡಿಗೆರೆ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಮತ್ತು ಕೃಷಿಕ ಸಮಾಜದ ಸದಸ್ಯ ಹೆಚ್.ಕೆ. ಪೂರ್ಣೇಶ್ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಯ ನಂತರ ನಡೆದ ತರಬೇತಿಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ವ್ಯವಹಾರಿಕಾ ಅವಕಾಶಗಳ ಬಗ್ಗೆ ಮಹೇಶ್ ಚಂದ್ರ ಗುರು ಅವರು, ಸಮಗ್ರ ಕೃಷಿಯ ಬಗ್ಗೆ ಅಮರ್ ಡಿಸೋಜಾ, ಜೇನು ಕೃಷಿಯ ಬಗ್ಗೆ ಡಾ. ಸುಚಿತ್ರ ಕುಮಾರ್, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆ ಕಾರ್ಯಕ್ರಮಗಳ ಬಗ್ಗೆ ಹರಿಪ್ರಸಾದ್ ಡಿ, ಹಲಸಿನ ಮೌಲ್ಯ ವರ್ಧನೆಯ ಬಗ್ಗೆ ಸ್ನೇಹ ಸೀಗೆಹಳ್ಳಿ ಅವರು ತರಬೇತಿ ನೀಡಿದರು.



