ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಬುಧವಾರ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರು ಸಂಸದರಿಗೆ ಹಲವು ಅಹವಾಲುಗಳನ್ನು ನೀಡಿದರು. ಊರುಬಗೆ ಗ್ರಾಮ ಪಂಚಾಯಿತಿ ಅತಿವೃಷ್ಟಿ ಪ್ರದೇಶವಾಗಿದ್ದು, ಅತಿಯಾದ ಮಳೆ ಮತ್ತು ಗಾಳಿಯಿಂದ ಬೆಳೆಗಳೆಲ್ಲಾ ನೆಲಕಚ್ಚಿವೆ. ಆದ್ದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕಾಡಾನೆ, ಕಾಡುಕೋಣ ಮುಂತಾದ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕು ಎಂದರು. ಭೈರಾಪುರ-ಶಿಶಿಲ ರಸ್ತೆಯನ್ನು ಭಾರತ ಮಾಲಾ ಯೋಜನೆಯಡಿ ಸೇರಿಸಿ ಅಭಿವೃದ್ಧಿಪಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದ ಸಂಸದರು ; ಈ ಪ್ರದೇಶದ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಇಲ್ಲಿನ ಸಮಸ್ಯೆಗಳಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಮತ್ತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪುಷ್ಪ, ಉಪಾಧ್ಯಕ್ಷ ಕೆ.ಪಿ. ಭಾರತಿ, ಸಂತೋಷ್ ಕುಂಬರಡಿ, ನಚಿಕೇತ್ ಬೈರಾಪುರ, ಮಾಜಿ ಅಧ್ಯಕ್ಷರಾದ ರವೀಂದ್ರ ಬಾಳೆಗದ್ದೆ, ಮಾಜಿ ಉಪಾಧ್ಯಕ್ಷ ಸಂತೋಷ್ ಮೇಕನಗದ್ದೆ, ದೀಪಕ್ ದೊಡ್ಡಯ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು, ಸ್ಥಳೀಯ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಪಿಡಿಓ, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.



