ಸರಕಾರ, ಸದನ ಹಾಗೂ ಸಾರ್ವತಿಕ ಮಟ್ಟದಲ್ಲಿ ಧರ್ಮ, ಜಾತಿ ಸೇರಿದಂತೆ ಬೇಡದ ಅನೇಕ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಕಾರ್ಮಿಕರ ಸಮಸ್ಯೆ ಬಗ್ಗೆ ಯಾವುದೇ ಚರ್ಚೆ ನಡೆಯದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು.
ಅವರು ಶನಿವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 3 ಕೋಟಿ ಮಂದಿ ಕಾರ್ಮಿಕರಿದ್ದಾರೆ. ಕಳೆದ 2 ದಶಕದಿಂದ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕ ಹಾಗೂ ನೌಕರರ ಸಂಖ್ಯೆ 1.70 ಲಕ್ಷ ದಾಟಿದೆ. ಈ ಕಾರ್ಮಿಕರಿಗೆ ಸರಕಾರ ಪ್ರತಿ ವರ್ಷ ಘೋಷಿಸುವ ಕನಿಷ್ಟ ವೇತನ ಕೂಡ ಪಾವತಿಯಾಗುತ್ತಿಲ್ಲ. ಅಲ್ಲದೇ ಖಾಯಂ ಹುದ್ದೆಯವರಿಗೆ ಕನಿಷ್ಟ 50 ಸಾವಿರ ವೇತನವಾದರೆ, ಅದೇ ಕೆಲಸ ಗುತ್ತಿಗೆ ಆಧಾರದಲ್ಲಿ ಮಾಡುವವರಿಗೆ ಕನಿಷ್ಟ 10 ಸಾವಿರ, ಗರಿಷ್ಟ 15 ಸಾವಿರ ಮಾತ್ರ ವೇತನ ನೀಡಲಾಗುತ್ತಿದೆ. ಈ ತಾರತಮ್ಯ ನಿವಾರಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ತೋಟ, ಕಾರ್ಖಾನೆ ಸೇರಿದಂತೆ ನಾನಾ ಕಡೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸ್ಥಿತಿ ಹಾಗೂ ಸಾಮಾಜಿಕ ಭದ್ರತೆ ಕೇಳುವವರೇ ಇಲ್ಲದಂತಾಗಿದೆ. ಕಾರ್ಮಿಕರಿಗೂ ಕೂಡ ಒಂದು ಬದುಕಿದೆ, ಕುಟುಂಬವಿದೆ. ಅವರ ದುಡಿಮೆಗೆ ಪ್ರತಿಫಲವಾಗಿ ಕನಿಷ್ಟ ವೇತನ ಸಿಗುವ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳು ಮಾತನಾಡುತ್ತಿಲ್ಲ. ಗುತ್ತಿಗೆ ಕಾರ್ಮಿಕ ರದ್ಧತಿ ಹಾಗೂ ನಿಯಂತ್ರಣ ಅಧಿನಿಯಮ 1971 ಸೆಕ್ಷನ್ 25(2)(ವಿ)(ಎ) ಖಾಯಂ ನೌಕರರು ಮಾಡುವ ಕೆಲಸದಂತೆ ಗುತ್ತಿಗೆ ನೌಕರ ಕೂಡ ಮಾಡಿದರೆ ಖಾಯಂ ಕೆಲಸ ಮಾಡುವವರಿಗೆ ನೀಡುವ ವೇತನವನ್ನು ಗುತ್ತಿಗೆ ಹಾಗೂ ತಾತ್ಕಾಲಿಕ ಕೆಲಸಗಾರನಿಗೂ ನೀಡಬೇಕೆಂಬ ನಿಯಮವಿದೆ. ಈ ವೇತನ ತಾರತಮ್ಮ ಸರಿಯಲ್ಲವೆಂದು ಉನ್ನತ ನ್ಯಾಯಾಲಯಗಳು ತೀರ್ಪು ನೀಡಿದ್ದರೂ ಕಾರ್ಮಿಕರಿಗೆ ಸಮಾನ ವೇತನ ಸಿಗುತ್ತಿಲ್ಲ. ಹಾಗಾಗಿ ಈ ಸಮಸ್ಯೆ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಟಿಯುಸಿಐ ರಾಜ್ಯಾಧ್ಯಕ್ಷ ಎಂ.ಡಿ.ಅಮೀರ್ ಅಲಿ, ಉಪಾಧ್ಯಕ್ಷ ಎಂ.ಗಂಗಾಧರ್, ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ, ಕಾರ್ಯದರ್ಶಿ ಬಿ.ಕೆ.ಗೋಪಾಲ್, ನಿರಂಜನ್, ಉಮೇಶ್ ಉಪಸ್ಥಿತರಿದ್ದರು.



