ಕೊಟ್ಟಿಗೆಹಾರ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈದ್ ಮಿಲಾದ್ ಹಬ್ಬವನ್ನು ಭಕ್ತಿಭಾವಪೂರ್ಣವಾಗಿ ಹಾಗೂ ಹರ್ಷೋಲ್ಲಾಸದಿಂದ ಆಚರಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಚಕ್ ಮಕ್ಕಿ ಖಲಂದರಿಯ ಅನಾಥ ಶ್ರಮ ಪ್ರಿನ್ಸಿಪಾಲ್ ಸಿನಾನ್ ಉಸ್ತಾದ್ ಮಾತನಾಡಿ
“ಮೊಹಮ್ಮದ್ ಪೈಗಂಬರ್ (ಸ.ಅ) ಅವರ ಜನ್ಮದಿನವು ಮಾನವಕೋಶಕ್ಕೆ ಬೆಳಕನ್ನು ತಂದ ದಿನ. ಅವರ ಜೀವನವೇ ಪ್ರೀತಿ, ಶಾಂತಿ ಮತ್ತು ಕರುಣೆಯ ಪಾಠ. ನಮ್ಮ ಬದುಕಿನಲ್ಲಿ ಅವರ ಆದರ್ಶಗಳನ್ನು ಪಾಲಿಸುವುದೇ ನಿಜವಾದ ಭಕ್ತಿ. ಮೊಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬವು ಸಹೋದರತ್ವ ಮತ್ತು ಒಳ್ಳೆಯತನದ ಸಂದೇಶವನ್ನು ಸಾರುತ್ತದೆ,” ಎಂದು ಕರೆ ನೀಡಿದರು.
ಹಿರಿಯ ಮುಖಂಡ ಹಾಜಿ ಟಿ. ಎ. ಖಾದರ್ ಹೇಳಿದರು, “ಈದ್ ಮಿಲಾದ್ ಹಬ್ಬವು ಪ್ರೀತಿ, ಸಹಾನುಭೂತಿ ಹಾಗೂ ಸಹೋದರತ್ವದ ಸಂದೇಶವನ್ನು ಸಾರುತ್ತದೆ. ನಿಜವಾದ ಮುಸ್ಲಿಮನು ಮೊಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಪಾಲಿಸಿಕೊಂಡು ಸಮಾಜದಲ್ಲಿ ಶಾಂತಿ ಮತ್ತು ಒಳ್ಳೆಯತನವನ್ನು ಹರಡಬೇಕು.”
ಗುರುಗಳು ಇಮ್ದಾದಿ ಮುಸ್ಲಿಯಾರ್ ಮಾತನಾಡಿ “ಮಕ್ಕಳಲ್ಲಿ ಧಾರ್ಮಿಕ ಅರಿವು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವುದು ನಮ್ಮ ಪ್ರಮುಖ ಕರ್ತವ್ಯ. ಧರ್ಮದ ಪಾಠವು ಜೀವನವನ್ನು ಬೆಳಗಿಸುವ ದೀಪವಾಗಿದೆ.”
ಮೊಹಮ್ಮದ್ ಪೈಗಂಬರ್ ಅವರ ನುಡಿಗಳನ್ನು ಸ್ಮರಿಸಿ, “ಉತ್ತಮ ವ್ಯಕ್ತಿ ಎಂದರೆ ತನ್ನ ನೆರೆಯವರಿಗೆ ಸಹಾಯ ಮಾಡುವವನು” ಮತ್ತು “ಜನರಿಗಾಗಿ ಒಳ್ಳೆಯದನ್ನು ಬಯಸಿದವನೇ ನಿಜವಾದ ನಂಬಿಕೆಯವನು” ಎಂಬ ಸಂದೇಶ ಹಂಚಿಕೊಳ್ಳಲಾಯಿತು.

ಕಾರ್ಯಕ್ರಮದ ಅಂಗವಾಗಿ ಮದ್ರಸದಲ್ಲಿ ಪ್ರತಿಭೆ ತೋರಿದ ಮಕ್ಕಳಿಗೆ ಹಾಗೂ ಶ್ರದ್ಧೆಯಿಂದ ಹಾಜರಾತಿ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಹಿರಿಯರು ಹಾಗೂ ಗುರುಗಳಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ಮಸೀದಿಯ ಅಧ್ಯಕ್ಷ ಮುನೀರ್, ಕಾರ್ಯದರ್ಶಿ ಹಸೇನ, ಜಮಾತಿನ ಸದಸ್ಯರು ಹಾಗೂ ಮುಸ್ಲಿಂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.



